ನನ್ನ ಕೊಲೆಗೆ ಸುಪಾರಿ ನೀಡಲಾಗಿದೆ : ಶಾಸಕ

ನನ್ನ ಕೊಲೆಗೆ ಸುಪಾರಿ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಅವರು, ನನ್ನನು ಮುಗಿಸಲು ಹುನ್ನಾರ ನಡೆಸಲಾಗಿದೆ. ನನ್ನ ಕೊಲೆಗೆ 25 ಲಕ್ಷ ರುಪಾಯಿ ಸುಪಾರಿ ನೀಡಲಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ತಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಈ ಸಂಬಂಧ 18 ಜನರನ್ನು ಬಂಧಿಸಿದ್ದಾರೆ. ಆದರೆ ಆರೋಪಿಗಳು ಜೈಲಿನಿಂದಲೇ ನನ್ನ ಕೊಲೆಗೆ ಸ್ಕೆಚ್ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ತಮ್ಮ ಕೊಲೆಗೆ ಸಂಚು ನಡೆಸುತ್ತಿರುವವರ ಬಗ್ಗೆ ಮಾಹಿತಿ ನೀಡಿ ಎಂದು ಕೃಷ್ಣಪ್ಪ ಸರ್ಕಾರವನ್ನು ಆಗ್ರಹಿಸಿದರು.
ಕೃಷ್ಣಪ್ಪ ಅವರ ಆರೋಪಕ್ಕೆ ಉತ್ತರಿಸಿದ ಡಿಸಿಎಂ ಆರ್. ಅಶೋಕ್ ಅವರು ಈ ಬಗ್ಗೆ ತಾವು ಪೊಲೀಸರಿಂದ ಮಾಹಿತಿ ಪಡೆಯುತಿದ್ದು, ನಾಳೆ ಚರ್ಚೆ ಮಾಡಲಾಗುವುದು ಎಂದು ಉತ್ತರಿಸಿದರು.
ಈ ಹಿಂದೆಯೂ ಪರಿಷತ್ ಸದಸ್ಯ ಕೃಷ್ಣಪ್ಪ ಅವರು ತಮ್ಮ "ಕೊಲೆ ಸಂಚು' ಕುರಿತು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಜೈಲಿನಲ್ಲಿದ್ದ ಆರೋಪಿಗಳು ಅಲ್ಲಿಂದಲೇ ಕೊಲೆ ಸ್ಕೆಚ್ ಹಾಕಿದ್ದು, ಒರಿಸ್ಸಾ ಮೂಲದ ಸುಪಾರಿ ಕಿಲ್ಲರ್ಸ್ ಸಂಪರ್ಕ ಸಾಧಿಸಿದ್ದಾರೆ, ಕೊಲೆಗೆ 25 ಲಕ್ಷ ರು ಸುಪಾರಿ ನೀಡಲಾಗಿದೆ. ಎರಡನೇ ಕಂತಿನಲ್ಲಿ 10 ಲಕ್ಷ ರು ನೀಡಲು ಡೀಲ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಕೃಷ್ಣಪ್ಪ ಹೊರ ಹಾಕಿದರು.
ನನ್ನನ್ನು ಕೊಲ್ಲಲ್ಲು ಯಾರು? ಯಾವ ಕಾರಣಕ್ಕೆ ಸಂಚು ರೂಪಿಸಿದ್ದಾರೆ? ಪ್ರಕರಣದ ತನಿಖೆ ಎಲ್ಲಿವರೆಗೂ ಬಂತು? ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಕೃಷ್ಣಪ್ಪ ಹೇಳಿದರು. ಒಂದು ಹಂತದಲ್ಲಿ ಬೆತ್ತನಗೆರೆ ಶಂಕರನ ಸಹಚರರು ಕೃಷ್ಣಪ್ಪ ಅವರ ಮೇಲೆ ಕೊಲೆ ಸ್ಕೆಚ್ ಹಾಕಿರುವ ಬಗ್ಗೆ ಕೇಳಿ ಬಂದಿತ್ತು. ನಂತರ ನೆಲಮಂಗಲದ ಮಾದನಾಯಕನ ಹಳ್ಳಿಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು.












Click it and Unblock the Notifications