ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಜಿಪುರ ನಿವಾಸಿಗಳ ಗೋಳು ಕೇಳೋರು ಯಾರು?

By Prasad
|
Google Oneindia Kannada News

Displaced woman threatens to commit suicide
ಬೆಂಗಳೂರು, ಜ. 31 : ಮನೆಮಠ ಕಳೆದುಕೊಂಡು ಬೀದಿಪಾಲಾಗಿರುವ, ಮನೆಗೆಲಸ ಮಾಡಿಯೇ ಇಡೀ ಕುಟುಂಬ ಸಾಕುತ್ತಿರುವ ಮಹಿಳೆಯೊಬ್ಬಳು ವಸತಿಗಾಗಿ ಬೇರೆ ವ್ಯವಸ್ಥೆ ಮಾಡಿಕೊಡದಿದ್ದರೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ ಘಟನೆ ಬುಧವಾರ ಈಜಿಪುರದಲ್ಲಿ ನಡೆದಿದೆ.

ಆರ್ಥಿಕವಾಗಿ ದುರ್ಬಲವಾಗಿರುವ ಕಾರ್ಮಿಕರಿಗಾಗಿ ನಿರ್ಮಿಸಿದ್ದ ಮನೆಗಳನ್ನು ವಾಣಿಜ್ಯ ಮಳಿಗೆ ನಿರ್ಮಿಸಲು ನೆಲಸಮ ಮಾಡಿರುವ ಹಿನ್ನೆಲೆಯಲ್ಲಿ ನೂರಾರು ದುರ್ಬಲ ವರ್ಗದವರು ಮನೆಮಠ ಕಳೆದುಕೊಂಡು ರಸ್ತೆಪಾಲಾಗಿದ್ದಾರೆ. ಆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಹಠಹಿಡಿದಿರುವ ಅವರು ಅಲ್ಲೇ ತಾತ್ಕಾಲಿಕ ಟೆಂಟ್ ಹಾಕಿಕೊಂಡು ದಿನರಾತ್ರಿ ಕಳೆಯುತ್ತಿದ್ದಾರೆ.

ಅಂಥವರಲ್ಲಿ ವಿಜಯಲಕ್ಷ್ಮಿ ಎಂಬವರು ಕೂಡ. ಮನೆಗೆಲಸ ಮಾಡಿಕೊಂಡು ಆಸ್ತಮಾದಿಂದ ಬಳಲುತ್ತಿರುವ ಕೆಲಸವಿಲ್ಲದ ಗಂಡ, ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳನ್ನು ಸಾಕುತ್ತಿದ್ದಾರೆ. ಆ ಗಂಡು ಮಕ್ಕಳಲ್ಲಿ ಒಬ್ಬ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾನೆ. ಸದ್ಯಕ್ಕೆ ಪ್ಲಾಸ್ಟಿಕ್ ಶೀಟನ್ನೇ ಸೂರನ್ನಾಗಿ ಮಾಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಆ ಪ್ರದೇಶದಲ್ಲಿ ಅರ್ಧ ಭಾಗ ವಾಣಿಜ್ಯ ಮಳಿಗೆ ಮತ್ತು ಅರ್ಧ ಭಾಗ ವಸತಿ ಸಂಕೀರ್ಣ ನಿರ್ಮಿಸುತ್ತಿರುವ ಕಂಪನಿಯ ಕೆಲಸಗಾರರು ವಿಜಯಲಕ್ಷ್ಮಿ ಮತ್ತು ಕುಟುಂಬವನ್ನು ಜಾಗ ಖಾಲಿ ಮಾಡೆಂದು ಹೇಳಿದಾಗ, ಕೈಯಲ್ಲಿ ಸೀಮೆಎಣ್ಣೆ ಬಾಟಲಿ ಹಿಡಿದುಕೊಂಡು ಆ ಹೆಣ್ಣುಮಗಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದರು. ಬೇರೆ ದಾರಿಯಿಲ್ಲದೆ ಕೆಲಸಗಾರರು ಅಲ್ಲಿಂದ ತೊಲಗಬೇಕಾಯಿತು.

"ನನ್ನ ಮಗ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾನೆ. ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾನೆ. ಮಗಳು 9ನೇ ಕ್ಲಾಸಿನಲ್ಲಿ ಓದುತ್ತಿದ್ದಾಳೆ. ನಾನು ಮನೆಗೆಲಸ ಮಾಡಿ ಜೀವನ ಸಾಗಿಸಬೇಕು. ಈಗ ಬೇರೆಡೆ ಹೋಗೆಂದರೆ ಎಲ್ಲಿ ಹೋಗಬೇಕು?" ಎಂದು ಕೇಳುತ್ತಾಳೆ ವಿಜಯಲಕ್ಷ್ಮಿ. ತಮಿಳುನಾಡಿನ ಮೂಲದವಳಾದ ವಿಜಯಲಕ್ಷ್ಮಿ ಮತ್ತು ಕುಟುಂಬ ಬೆಂಗಳೂರಿನಲ್ಲಿ ಕಳೆದ 22 ವರ್ಷಗಳಿಂದ ನೆಲೆಸುತ್ತಿದೆ.

ಇದು ಇವರೊಬ್ಬರ ಕಥೆಯಲ್ಲ. ಸೂರಿಲ್ಲದೆ ಬಿಸಿಲು ಚಳೆಯೆನ್ನದೆ ಅಲ್ಲೇ ಜೀವನ ದೂಡುತ್ತಿರುವ ಅನೇಕ ಕುಟುಂಬಗಳು ಈಗ ಬೀದಿಪಾಲಾಗಿವೆ. ಅಸಹನೀಯ ಬದುಕು ಕಾಣುತ್ತಿರುವ ಜನರಿಗಾಗಿ ಅನೇಕ ಸಂಘ ಸಂಸ್ಥೆಗಳು ಸಹಾಯಕ್ಕಾಗಿ ಮುಂದೆ ಬಂದಿವೆ, ಊಟ ಬಟ್ಟೆಬರೆಗಳನ್ನು ನೀಡುತ್ತಿವೆ. ಇಲ್ಲಿನ ಜನರಿಗೆ ಪರಿಹಾರ ಒದಗಿಸಲೆಂದು ಫೇಸ್ ಬುಕ್ ಪುಟ ತೆರೆಯಲಾಗಿದೆ. ಆದರೆ, ಸರಕಾರ ಮಾತ್ರ ಇತ್ತ ಸುಳಿಯುತ್ತಿಲ್ಲ ಎಂಬ ಕೊರಗು ಜನರದು.

ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಆರ್ ಅಶೋಕ್ ಅವರು, ಮನೆ ಕಳೆದುಕೊಂಡವರಿಗೆಲ್ಲ ಗುರುತಿನ ಚೀಟಿ ನೀಡಿ, ವಸತಿಗೆ ಬೇರೆ ವ್ಯವಸ್ಥೆ ಮಾಡುವುದಾಗಿ ವಾಗ್ದಾನ ನೀಡಿದ್ದಾರೆ. ಆದರೆ, ಇನ್ನೂ ಬೇರೆ ವ್ಯವಸ್ಥೆ ಮಾಡಿಲ್ಲ ಎನ್ನುವುದು ಅವರ ಕೊರಗು. ಈ ಜನರ ಕೊರಗು, ಕೂಗು ಅಶೋಕ್ ಅವರಿಗೆ ಕೇಳುವುದೆ?

English summary
A displaced woman in Ejipura threatened to commit suicide by pouring kerosine if they are evicted from Ejipura, where their house was demolished by a company which is constructing commercial and residential apartment. This is not the story of a single woman, but of all who have lost home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X