ಶಾರೂಖ್ ಖಾನಿಗೆ ಮತ್ತಷ್ಟು ಮುಜುಗರ ತಂದ ಪಾಕ್ ಸಚಿವ

ಶಾರೂಖ್ ಖಾನ್ ಭಾರತದಲ್ಲಿ ಹುಟ್ಟಿ ಬೆಳೆದದ್ದು. ಅವರಿಗೆ ಸೂಕ್ತ ಭದ್ರತೆ ನೀಡುವುದು ಭಾರತ ಸರಕಾರದ ಜವಾಬ್ದಾರಿ. ಭಾರತ ಸರಕಾರ ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.
ಭಾರತದಲ್ಲಿರುವ ನನ್ನ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ವಿನಂತಿ ಏನಂದರೆ ಶಾರೂಖ್ ಖಾನ್ ವಿರುದ್ದ ಮಾತನಾಡುವುದನ್ನು ನಿಲ್ಲಿಸಲಿ ಎಂದು ರೆಹಮಾನ್ ಮಲಿಕ್ ವೃಥಾ ಮೂಗು ತೂರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಭಾರತ ಮತ್ತು ಪಾಕಿಸ್ತಾನದಲ್ಲಿ ಶಾರೂಖಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಸೆಲೆಬ್ರಿಟಿಗಳು ಏಕತೆಯ ಸಂಕೇತ, ಅವರ ವಿರುದ್ದ ಮಾತನಾಡುತ್ತಿರುವವರು ಅವರನ್ನು ಪ್ರೀತಿಸಲು ಆರಂಭಿಸುತ್ತಾರೆ ಎಂದು ರೆಹಮಾನ್ ಮಲಿಕ್ ಡೈಲಾಗ್ ಹೊಡೆದಿದ್ದಾರೆ.
ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಶರತ್ ಶಬರಿವಾಲ್ ಗಣರಾಜ್ಯೋತ್ಸವ ಸಂಬಂಧ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಮಾತನಾಡುತ್ತಿದ್ದ ಮಲಿಕ್, ಪಾಕಿಸ್ತಾನ ಶಾಂತಿಪ್ರಿಯ ರಾಷ್ಟ್ರ. ನಾವು ಎಂದೆಂದಿಗೂ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ಪ್ರೀತಿ ವಿಶ್ವಾಸ ಇರಬೇಕೆಂದು ಬಯಸುತ್ತೇವೆ ಎಂದು ಹೇಳಿದರು.
ಔಟ್ ಲುಕ್ ಟರ್ನಿಂಗ್ ಪಾಯಿಂಟ್ ಮ್ಯಾಗಜಿನ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ 'ಮುಸ್ಲಿಮನಾಗಿ ಭಾರತದಲ್ಲಿ ನನ್ನ ಜೀವನದ' ಬಗ್ಗೆ ಮಾತನಾಡುತ್ತಿದ್ದ ಶಾರೂಖ್, ಭಾರತದಲ್ಲಿರುವ ಮುಸ್ಲಿಮರೆಲ್ಲರೂ ಭಯೋತ್ಪಾದಕರು ಎಂದು ಇಲ್ಲಿನ ರಾಜಕಾರಿಣಿಗಳು ತಪ್ಪಾಗಿ ಯೋಚಿಸುತ್ತಿದ್ದಾರೆ ಎಂದು ಶಾರೂಖ್ ಖಾನ್ ಹೇಳಿದ್ದರು.
ಶಾರೂಖ್ ಖಾನ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಜಮಾತ್-ಉದ್-ದಾವ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸಯೀದ್, ಶಾರೂಖ್ ಅವರಿಗೆ ಪಾಕಿಸ್ತಾನದಲ್ಲಿ ಬಂದು ನೆಲೆಸಲು ಆಹ್ವಾನ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.











Click it and Unblock the Notifications