ಪುತ್ರಿಯರ ಅಕ್ರಮ ನೇಮಕಾತಿ ಆರೋಪ: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು
ರಾಜ್ಯದ ಉನ್ನತ ನೇಮಕಾತಿ ಪ್ರಾಧಿಕಾರಗಳಲ್ಲಿ ಒಂದಾಗಿರುವ ಕರ್ನಾಟಕ ಲೋಕಸೇವಾ ಆಯೋಗ ಇದೀಗ ಭಾರೀ ವಿವಾದಕ್ಕೆ ಸಿಲುಕಿದೆ. ಸಾಂವಿಧಾನಿಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಪುತ್ರಿಯರಿಗೆ ಸರ್ಕಾರಿ ಹುದ್ದೆ ಕೊಡಿಸಲು ಮುಂದಾಗಿರುವ ಗಂಭೀರ ಆರೋಪದ ಮೇಲೆ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಅಮಾನತು ಮಾಡಲಾಗಿದೆ. ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೇಹಲೋತ್ ಇಂದು (ಜುಲೈ 13) ಈ ಮಹತ್ವದ ಆದೇಶವನ್ನಾ ಹೊರಡಿಸಿದ್ದಾರೆ.
ಎಲ್ಲರಿಗೂ ತಿಳಿದಿರುವ ಹಾಗೆ, ಈ ಲೋಕಸೇವಾ ಆಯೋಗವು ರಾಜ್ಯದ ಲಕ್ಷಾಂತರ ಯುವಜನರ ಭವಿಷ್ಯವನ್ನು ರೂಪಿಸಲು ಇರುವ ಪ್ರಮುಖ ಸಂಸ್ಥೆ. ಆದರೆ ಈ ಆಯೋಗದ ಅಧ್ಯಕ್ಷರ ವಿರುದ್ಧವೇ ಆರೋಪ ಕೇಳಿಬಂದಿರುವುದು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೆ ಮತ್ತು ಮುಕ್ತ ತನಿಖೆ ನಡೆಯಬೇಕು ಎನ್ನುವ ಉದ್ದೇಶದಿಂದ ರಾಜ್ಯಪಾಲರಾದ ಥಾವರ್‌ಚಂದ್ ಗೇಹಲೋತ್ ಅವರು ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನ ಕೆಪಿಎಸ್‌ಸಿ ಅಧಕ್ಷರ ಹುದ್ದಯಿಂದ ಅಮಾನತು ಮಾಡಿದ್ದಾರೆ. ಹಾಗೆಯೇ ಆಯೋಗದ ದೈನಂದಿನ ಕೆಲಸಗಳಿಗೆ ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳಲು ಕೆಪಿಎಸ್‌ಸಿಯ ಹಿರಿಯ ಸದಸ್ಯರಿಗೆ ಅಧ್ಯಕ್ಷರ ಪ್ರಭಾರ ಜವಾಬ್ದಾರಿಯನ್ನು ನೀಡಲಾಗಿದೆ.

ಪ್ರಕರಣದ ಹಿನ್ನೆಲೆ:
ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಯ ನೇಮಕಾತಿಯಿಂದ ಶುರುವಾಯಿತು ನೋಡಿ ಈ ಆರೋಪ. ಶಿವಶಂಕರಪ್ಪ ಎಸ್. ಸಾಹುಕಾರ್ ಅವರ ಇಬ್ಬರು ಪುತ್ರಿಯರು ಕೆಪಿಎಸ್‌ಸಿ ನಡೆಸಿದ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಾಗಿ ಭಾಗವಹಿಸಿದ್ದರು. ನಿಯಮಗಳ ಪ್ರಕಾರ, ತಮ್ಮ ಸ್ವಂತ ಮಕ್ಕಳು ಅಥವಾ ಸಂಬಂಧಿಕರು ಅಭ್ಯರ್ಥಿಗಳಾಗಿದ್ದಾಗ ಅಧಿಕಾರಿಗಳು ನೇಮಕಾತಿ ಪ್ರಕ್ರಿಯೆಯಿಂದ ದೂರ ಉಳಿಯಬೇಕು. ಆದರೆ ಸಾಹುಕಾರ್ ಅವರು ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿಯಲಿಲ್ಲ ಎಂಬುದು ಪ್ರಮುಖ ಆರೋಪ. ಇದು ನೇಮಕಾತಿ ನಿಯಮಗಳ ಉಲ್ಲಂಘನೆ ಎಂದು ದೂರುದಾರರು ಆರೋಪಿಸಿದ್ದಾರೆ.
ನಕಲಿ ಪ್ರಮಾಣಪತ್ರ ಮತ್ತು ಓಬಿಸಿ ಮೀಸಲಾತಿ ವಂಚನೆ
ಈ ಪ್ರಕರಣದಲ್ಲಿ ಅಧ್ಯಕ್ಷರು ಕೇವಲ ಅಧಿಕಾರ ಮಾತ್ರ ದುರ್ಬಳಕೆ ಮಾಡಿಕೊಂಡಿಲ್ಲ, ಮೀಸಲಾತಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ರಾಜ್ಯಪಾಲರ ಸಚಿವಾಲಯದ ಆದೇಶದಿಂದ ಬಹಿರಂಗವಾಗಿದೆ. ಸಾಹುಕಾರ್ ಅವರ ಒಬ್ಬಳು ಮಗಳು ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯ ಲಾಭ ಪಡೆಯಲು ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ, ತಂದೆ ಕೆಪಿಎಸ್‌ಸಿ ಉನ್ನತ ಹುದ್ದೆಯಲ್ಲಿದ್ದರೂ, ಕುಟುಂಬದ ವಾರ್ಷಿಕ ಆದಾಯ ಕೇವಲ 40,000 ಎಂದು ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಪಡೆದಿದ್ದಾರೆ.
ಕರ್ನಾಟಕ ಸರ್ಕಾರ ಮಾರ್ಚ್ 30, 2002ರಂದು ಹೊರಡಿಸಿರುವ ಆದೇಶದ ಪ್ರಕಾರ, ಲೋಕಸೇವಾ ಆಯೋಗದ ಅಧ್ಯಕ್ಷರ ಮಕ್ಕಳು ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಅನರ್ಹರು. ಇದು ತಿಳಿದಿದ್ದರು ಕೂಡ, ಈ ಮಾಹಿತಿಯನ್ನು ಮುಚ್ಚಿಟ್ಟು ಅಕ್ರಮವಾಗಿ ಮೀಸಲಾತಿ ಕೋಟಾದಡಿ ಹುದ್ದೆ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಸುಪ್ರೀಂ ಕೋರ್ಟ್ ತನಿಖೆಗೆ ಶಿಫಾರಸು
ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ರಾಜ್ಯಪಾಲರು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ. ಭಾರತೀಯ ಸಂವಿಧಾನದ 317(1) ನೇ ವಿಧಿಯ ಅನ್ವಯ ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧದ ಈ ಆರೋಪವನ್ನ ಸುಪ್ರೀಂ ಕೋರ್ಟ್ ವಿಚಾರಣೆಗೆ ಒಳಪಡಿಸುವಂತೆ ಕೋರಿದ್ದಾರೆ. ಆಸ್ತಿ ವಿವರಗಳು, ಆದಾಯದ ರಿಟರ್ನ್ಸ್‌ಗಳು ಹಾಗೂ ಲಭ್ಯವಿರುವ ಪ್ರಾಥಮಿಕ ದಾಖಲೆಗಳನ್ನು ಪರಿಶೀಲಿಸಿದಾಗ ಅಧ್ಯಕ್ಷರ ದುರ್ನಡತೆ ಸಾಬೀತಾಗುವಂತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಷ್ಟ್ರಪತಿಗಳ ಮುಂದಿನ ಆದೇಶದವರೆಗೆ ಈ ಅಮಾನತು ಜಾರಿಯಲ್ಲಿರುತ್ತದೆ. ಇನ್ನೂ ಸುಪ್ರೀಂ ಕೋರ್ಟ್ ತನಿಖೆಯ ನಂತರವಷ್ಟೇ ಈ ಅಕ್ರಮದ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕಿದೆ.


Click it and Unblock the Notifications
