ಶೆಟ್ಟರ್ ಸರ್ಕಾರಕ್ಕೆ ಮಠ ಮಾನ್ಯಗಳ ಬೆಂಬಲ

Jagadish shettar
ಬೆಂಗಳೂರು, ಜ.28: ಗುರುವಿಗೆ ತಿರುಮಂತ್ರ ಹಾಕುವುದು ಹೇಗೆ ಎಂಬುದನ್ನು ಸಿಎಂ ಜಗದೀಶ್ ಶೆಟ್ಟರ್ ಅವರು ನಿಧಾನಗತಿಯಲ್ಲೇ ತೋರಿಸಿದ್ದಾರೆ. ಯಡಿಯೂರಪ್ಪ ಅವರ ರಾಜೀನಾಮೆ ಬೆದರಿಕೆ ನಾಟಕಕ್ಕೆ ಸ್ಪೀಕರ್ ಮರೆಯಾಗಿಸಿ ತಕ್ಕ ಉತ್ತರ ನೀಡಿದ್ದ ಶೆಟ್ಟರ್ ಕಣ್ಣು ಈಗ ಸ್ವಾಮೀಜಿಗಳತ್ತ ತಿರುಗಿದೆ.

ನೋಡೋದಕ್ಕೆ ಇದು ಬಜೆಟ್ ಪೂರ್ವ ಸಮಾಲೋಚನೆಯಂತೆ ಕಾಣುತ್ತಿತ್ತು. ಕೈಗಾರಿಕಾದೋದ್ಯಮಿಗಳು, ಆರ್ಥಿಕ ತಜ್ಞರು, ರೈತ ಸಂಘಟನೆಗಳೊಂದಿಗೆ ಬಜೆಟ್ ಬಗ್ಗೆ ಶೆಟ್ಟರ್ ಮಾತುಕತೆ ನಡೆಸಿದಂತೆ ಮಠ ಮಾನ್ಯಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ.

ರಾಜ್ಯದ 60ಕ್ಕೂ ಹೆಚ್ಚು ಮಠಾಧೀಶರು ನಾಡಿಗೆ ಉತ್ತಮ ಬಜೆಟ್ ನೀಡುವಂತೆ ಸಲಹೆ ನೀಡಿದ್ದು, ಬಿಜೆಪಿ ಸರ್ಕಾರ ಅಧಿಕಾರಾವಧಿ ಪೂರ್ಣಗೊಳಿಸಬೇಕು ಎಂದು ಬಯಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮಠ-ಮಾನ್ಯಗಳಿಗೆ ಈ ಬಾರಿಯ ಬಜೆಟ್‌ನಲ್ಲೂ ಅನುದಾನ ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.

ಸರ್ಕಾರ ಸುಭದ್ರವಾಗಿದೆ : ಕಳೆದ ನಾಲ್ಕೂವರೆ ವರ್ಷಗಳಿಂದ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ಇನ್ನುಳಿದ ಅವಧಿಯನ್ನೂ ಪೂರೈಸಲಿದೆ. ರಾಜ್ಯದ ಜನರಿಗೆ ಉತ್ತಮ ಬಜೆಟ್ ನೀಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತಿದ್ದು, ಮಠಾಧೀಶರ ಸಲಹೆ-ಸೂಚನೆಗಳನ್ನು ಪಡೆದಿದ್ದೇನೆ ಎಂದಿದ್ದಾರೆ.

ಸರ್ಕಾರ ಉಳಿಸಿಕೊಳ್ಳುವುದಕ್ಕಾಗಿ ವಾಮಮಾರ್ಗದಲ್ಲಿ ನಡೆಯುವುದಿಲ್ಲ. ಶಾಸಕರ ಖರೀದಿಯಂತಹ ಕುದುರೆ ವ್ಯಾಪಾರಕ್ಕೆ ಕೈ ಹಾಕುವುದಿಲ್ಲ. ಬಿಜೆಪಿಯ ಘನತೆ-ಗೌರವಕ್ಕೆ ಕಿಂಚಿತ್ತೂ ಚ್ಯುತಿ ಬಾರದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎಂದು ಶೆಟ್ಟರ್ ಹೇಳಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಅವರನ್ನು ಛಲವಾದಿ ಮಠದ ಶ್ರೀ ಮಾದಾರ ಚನ್ನಯ್ಯ, ಕಾಗಿನೆಲೆ ಮಠದ ಶ್ರೀ ನಿರಂಜನಾನಂದ ಶ್ರೀಗಳು, ಗವಿಪುರಂ ಮಠ, ಕುಂಚಿಟಿಗರ ಮಠ, ಗುರುಭೀಮ ಮಠ, ಷಡಕ್ಷರಿ ಮಠ, ಯಾದವ ಮಠ, ಜಂಗಮ ಮಠ, ಚಕ್ರಭಾವಿ ಮಠ ಸೇರಿದಂತೆ 60ಕ್ಕೂ ಹೆಚ್ಚು ಮಠಾಧೀಶರು ಭೇಟಿ ಮಾಡಿ ಆಶೀರ್ವದಿಸಿದರು.

ವೀರಶೈವ, ಒಕ್ಕಲಿಗ ಅಲ್ಲದೆ ಹಲವು ಸಮುದಾಯಗಳ ಸ್ವಾಮೀಜಿಗಳ ಬೆಂಬಲ ಸಿಕ್ಕಿರುವುದರಿಂದ ಶೆಟ್ಟರ್ ಅವರು ಕೆಜೆಪಿ ಬೆಂಬಲಿಗ ಶಾಸಕರ ರಾಜೀನಾಮೆಗೆ ಡೋಂಕ್ ಕೇರ್ ಎಂದಿದ್ದಾರೆ.

ಮಠ, ಮಂದಿರಗಳು ಸರ್ಕಾರದ ಕೆಲಸಗಳನ್ನೇ ಮಾಡುತ್ತಿರುವುದರಿಂದ ಅವರಿಗೆ ಅನುಕೂಲ ಮಾಡಿಕೊಡುವುದರಲ್ಲಿ ತಪ್ಪೇನಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕಾರ ಅವಧಿಯಲ್ಲಿ ಪ್ರಶ್ನಿಸಿದ್ದರು.

ಮಠ-ಮಾನ್ಯಗಳನ್ನೇ ಓಲೈಸುವುದರಲ್ಲಿಯೇ ಕಾಲಹರಣ ಮಾಡುತ್ತಾ ರಾಜ್ಯದ ಮೂಲೆ ಮೂಲೆಯ ದೇಗುಲ, ಮಠ ಮಾನ್ಯಗಳಿಗೆ ತಕ್ಕಮಟ್ಟಿಗೆ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಿದ್ದರು. ಈಗ ಶೆಟ್ಟರ್ ಅವರು ಇದೇ ಹಾದಿಯಲ್ಲಿ ಸಾಗಿದ್ದು, ಇನ್ನೂ ಹೆಚ್ಚಿನ ಅನುದಾನ ಘೋಷಿಸುವ ಭರವಸೆ ನೀಡಿದ್ದಾರೆ. ಸದಾನಂದ ಗೌಡರು ಕೂಡಾ ದೇಗುಲ, ಮಠಗಳಿಗೆ ಅನುದಾನ ಮುಂದುವರೆಸಿ 1 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದರು. ಈಗ ಶೆಟ್ಟರ್ ಅವರು ಒಂದೂವರೆ ಲಕ್ಷ ಕೋಟಿ ಬಜೆಟ್ ಮಂಡನೆ ಸಿದ್ಧತೆಯಲ್ಲಿದ್ದಾರೆ.

ಕರ್ನಾಟಕ ವಿಧಾನಸಭೆಯಲ್ಲಿ ಬಲಾಬಲ : 224 ರಲ್ಲಿ 117 ಬಿಜೆಪಿ ಸದಸ್ಯರಿದ್ದಾರೆ. 71 ಮಂದಿ ಕಾಂಗ್ರೆಸ್ಸಿಗರಿದ್ದಾರೆ ಹಾಗೂ ಜೆಡಿಎಸ್ 26 ಶಾಸಕರನ್ನು ಹೊಂದಿದೆ. ಇದಲ್ಲದೆ 7 ಮಂದಿ ಪಕ್ಷೇತರರು, 1 ನಾಮ ನಿರ್ದೇಶಿತ ಸದಸ್ಯರಿದ್ದಾರೆ. ಯಡಿಯೂರಪ್ಪ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ತೊರೆದ ಪರಿಣಾಮ 2 ಸ್ಥಾನಗಳು ಖಾಲಿ ಉಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+