ಆಟೋ ಡ್ರೈವರ್ ಕಿರಿಕ್ಕಾ? ಫೇಸ್‌ಬುಕ್‌ನಲ್ಲಿ ದೂರು ನೀಡಿ

ಕೇವಲ 1 ಕಿ.ಮೀ. ಕ್ರಮಿಸಿದ್ದರೂ 40 ರು. ಕಿತ್ತುಕೊಂಡ ಆಟೋ ವಾಹನ (ಕೆಎ 22 9949) ಚಾಲಕನ ವಿರುದ್ಧ ಗ್ರಾಹಕರೊಬ್ಬರು ಬೆಳಗಾವಿ ಟ್ರಾಫಿಕ್ ಪೊಲೀಸರು ತೆರೆದಿರುವ ಫೇಸ್ ಬುಕ್ ಪುಟ(www.facebook.com/trafficpolicebelgaum)ದಲ್ಲಿ ದೂರು ದಾಖಲಿಸಿದ್ದರು. ಈ ಘಟನೆ ನಡೆದಿದ್ದು ಜನವರಿ 21ರಂದು.
ರಾಮದೇವ್ ಸ್ಟಾಂಡಿನಿಂದ ಕೆಎಲ್ಇ ಆಸ್ಪತ್ರೆವರೆಗೆ ಕೇವಲ 1 ಕಿ.ಮೀ. ದೂರ ಸಾಗಿದ್ದರೂ ಆಟೋ ಡ್ರೈವರ್ ಗ್ರಾಹಕರಿಂದ 40 ರು. ಕಿತ್ತುಕೊಂಡಿದ್ದ. ಈ ದೂರನ್ನು ಅವರು ಫೇಸ್ ಬುಕ್ ಪುಟದಲ್ಲಿ ದಾಖಲಿಸಿದರು. ಕೂಡಲೆ ಕಾರ್ಯಾಚರಣೆಗಿಳಿದ ಟ್ರಾಫಿಕ್ ಪೊಲೀಸರು ಆಟೋ ಡ್ರೈವರನ್ನು ವಿಚಾರಿಸಲಾಗಿ ಆತ ಹೆಚ್ಚಿನ ಹಣ ಕಿತ್ತುಕೊಂಡಿದ್ದಾಗಿ ಒಪ್ಪಿಕೊಂಡ. ಆತ ಎಸಗಿದ ತಪ್ಪಿಗಾಗಿ 800 ರು. ದಂಡವನ್ನು ಆತ ಕಟ್ಟಿಬೇಕಾಯಿತು.
ಪ್ರತಿದಿನ ಆಟೋ ಚಾಲಕರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಅನೇಕ ದೂರುಗಳು ಟ್ರಾಫಿಕ್ ಪೊಲೀಸರಿಗೆ ಬರುತ್ತಿವೆ. ಅವುಗಳಲ್ಲಿ ಅನೇಕವು ಕೇವಲ ಸಲಹೆಗಳಾಗಿರುತ್ತವೆ ಎನ್ನುತ್ತಾರೆ ಬೆಳಗಾವಿ ಪೊಲೀಸ್ ಸುಪರಿಂಟೆಂಡೆಂಟ್ ಸಂದೀಪ್ ಪಾಟೀಲ. ಗ್ರಾಹಕರು ಆಟೋ ಹತ್ತುವಾಗ ಆಟೋ ನೋಂದಣಿ ಸಂಖ್ಯೆಯನ್ನು ಗುರುತಿಸಿಕೊಳ್ಳಲು ಮರೆಯಬಾರದು. ಏನಾದರೂ ತೊಂದರೆಯಾದರೆ ಆಟೋ ನಂಬರ್ ಸಮೇತ ದೂರ ಸಲ್ಲಿಸಬೇಕು. ಆಗ ಆದ ತೊಂದರೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎನ್ನುತ್ತಾರೆ ಪಾಟೀಲ.












Click it and Unblock the Notifications