ಬಿಜೆಪಿ ಅಧಿಕಾರಕ್ಕೆ ಬರಲಿ ಒಂದು 'ಕೈ' ನೋಡ್ಕೋತೀನಿ

ಇಂದು ಗುರುವಾರ ಇಲಾಖೆಯ ಅಧಿಕಾರಿಗಳಿಗೆ ಬಹಿರಂಗವಾಗಿ ಧಮ್ಕಿ ಹಾಕಿರುವ ಗಡ್ಕರಿ, 'ತಿಳ್ಕೊಳ್ಳಿ ನಾಳೆ BJP ಅಧಿಕಾರಕ್ಕೆ ಬಂದರೆ ನಿಮ್ಮ ಪಾಡು ಏನಾಗುತ್ತದೆ ಗೊತ್ತಾ? ಆಗ ನಿಮ್ಮನ್ನು ರಕ್ಷಿಸುವವರು ಯಾರು?' ಎಂದು ಅಧಿಕಾರಿಗಳನ್ನು ರೊಚ್ಚಿಗೆಬ್ಬಿಸಿದ್ದಾರೆ.
ಅಷ್ಟಕ್ಕೇ ಸುಮ್ಮನಾಗದ ಗಡ್ಕರಿ ಸಾಹೇಬರು 'ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯಾಗಲಿ ಅಥವಾ ಹಣಕಾಸು ಸಚಿವ ಪಿ ಚಿದಂಬರಂ ಆಗಲಿ ನಿಮ್ಮನ್ನು ರಕ್ಷಿಸಲಾರರು. ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ' ಎಂದೂ ಆವಾಜ್ ಹಾಕಿದ್ದಾರೆ.
ದೆಹಲಿಯಲ್ಲಿ ಕುಳಿತಿರುವ ಕಾಂಗ್ರೆಸ್ ನಾಯಕರ ಇಶಾರೆ ಮೇರೆಗೆ ದಾಳಿ ನಡೆಸಲಿಕ್ಕೆ ಬರಬೇಡಿ. ನೋಡ್ತಿರಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗುತ್ತದೆ' ಎಂದೆಲ್ಲಾ ಗಡ್ಕರಿ ಭೀತಿ ಹುಟ್ಟಿಸಿದ್ದಾರೆ.
ಬೇನಾಮಿ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಗಡ್ಕರಿ ಮಾಲೀಕತ್ವದ ಪೊರ್ತಿ ಸಮೂಹ ಸಂಸ್ಥೆಗಳು ಭಾರಿ ಪ್ರಮಾಣದಲ್ಲಿ ಆರ್ಥಿಕ ಅಕ್ರಮಗಳನ್ನು ಎಸಗಿವೆ ಎಂದು ಆದಾಯ ತೆರಿಗೆ ಇಲಾಖೆ ಮೊನ್ನೆ 2ನೆಯ ಬಾರಿಗೆ ಪೊರ್ತಿ ಕಂಪನಿಗಳ ಮೇಲೆ ದಾಳಿ ನಡೆಸಿತ್ತು. ತತ್ಸಂಬಂಧ, ಫೆ. 1ರಂದು ಇಲಾಖೆಯ ಮುಂದೆ ಹಾಜರಾಗುವಂತೆ ಕಳಂಕಿತ ಗಡ್ಕರಿಗೆ ಆದಾಯ ಇಲಾಖೆ ಸೂಚಿಸಿತ್ತು.
'ಈಗ ನಾನು ಬಿಜೆಪಿ ಅಧ್ಯಕ್ಷನಾಗಿ ಉಳಿದಿಲ್ಲ. ಈ ಹಿಂದೆ ನನ್ನನ್ನು ರಕ್ಷಿಸಿಕೊಳ್ಳುವಾಗ ಬಿಜೆಪಿ ಅಧ್ಯಕ್ಷನಾಗಿ ಒಂದಷ್ಟು ಶಿಷ್ಟಾಚಾರ, ಸಂಯಮ ಪ್ರದರ್ಶಿಸಬೇಕಿತ್ತು. ಆದರೆ ಇನ್ನು ಮುಂದೆ ಹಾಗೇನೂ ಇಲ್ಲ. ನನ್ನನ್ನು ನಾನು ರಕ್ಷಿಸಿಕೊಳ್ಳಬಲ್ಲೆ' ಎಂದು ಗಡ್ಕರಿ ಸಾಹೇಬರು ಕೂಗಾಡಿದ್ದಾರೆ.












Click it and Unblock the Notifications