ಕಾಂಗ್ರೆಸ್ ಉಪಾಧ್ಯಕ್ಷನಾಗಿ ರಾಹುಲ್ ಗಾಂಧಿಗೆ ಭಡ್ತಿ

ರಾಜಕೀಯಕ್ಕಿಳಿದು 9 ವರ್ಷಗಳ ನಂತರ ಮಹತ್ತರ ಜವಾಬ್ದಾರಿಯನ್ನು ಗಾಂಧಿ ಕುಟುಂಬದ ಕುಡಿ 42 ವರ್ಷದ ಯುವರಾಜ ರಾಹುಲ್ ಗಾಂಧಿ ಅವರ ಮೇಲೆ ಹೊರಿಸಲಾಗಿದೆ. ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ಪ್ರಸ್ತಾವನೆಗೆ ಯಾವುದೇ ವಿರೋಧ ಬರಲಿಲ್ಲ. ಗಾಂಧಿ ಕುಟುಂಬದ ಇಬ್ಬರು ಎರಡು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಇದು ಮೊದಲ ಬಾರಿ.
11 ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದ ರಾಹುಲ್ ಕಾರ್ಯನಿರ್ವಹಣೆಯನ್ನು ನೋಡಿ ಮುಂದಿನ ಜವಾಬ್ದಾರಿಗಳನ್ನು ಹೊರಿಸಲು ನಿರ್ಣಯಿಸಲಾಗಿದೆ. ರಾಹುಲ್ ಅವರನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಆಗ್ರಹ ಕೇಳಿ ಬರಲಾಗಿತ್ತಾದರೂ, ಆ ಕುರಿತಾಗಲಿ ಅಥವಾ 2014ರ ಲೋಕಸಭಾ ಚುನಾವಣೆಯ ನೇತೃತ್ವವನ್ನು ರಾಹುಲ್ ಅವರಿಗೆ ನೀಡಬೇಕೆಂಬ ನಿರ್ಣಯವನ್ನು ತೆಗೆದುಕೊಳ್ಳಲಾಗಿಲ್ಲ.
ಈ ಸಂಗತಿಯನ್ನು ಪ್ರಕಟಿಸಿದ ಜನಾರ್ದನ ತ್ರಿವೇದಿ ಅವರು, "ಮುಂಬರುವ ಚುನಾವಣೆಯ ಪ್ರಚಾರಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಾಗುವುದು" ಎಂದು ನುಡಿದರು. ಜೈಪುರದಲ್ಲಿ ಎರಡು ದಿನಗಳ ಕಾಲ ನಡೆದ ಚಿಂತನ ಶಿಬಿರದ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಿದ ತರುವಾಯ ರಾಹುಲ್ ಅವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಿದ ಬಗ್ಗೆ ಪ್ರಕಟಿಸಲಾಯಿತು.
ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಮೂರನೇ ವ್ಯಕ್ತಿಯಾಗಿದ್ದಾರೆ ರಾಹುಲ್ ಗಾಂಧಿ. ಈ ಹಿಂದೆ ಅರ್ಜುನ್ ಸಿಂಗ್ ಅವರು ರಾಜೀವ್ ಗಾಂಧಿ ಅವರ ಕೆಳಗಡೆ ಮತ್ತು ಜಿತೇಂದ್ರ ಪ್ರಸಾದ್ ಅವರು ಸೀತಾರಾಂ ಕೇಸರಿ ಅವರ ಕೆಳಗಡೆ ಉಪಾಧ್ಯಕ್ಷರಾಗಿದ್ದರು.
ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡುವುದು ಹೆಚ್ಚೂಕಡಿಮೆ ಖಚಿತ ಎಂಬ ಮಾತು ಕೇಳಿಬರುತ್ತಿರುವ ಸಂದರ್ಭದಲ್ಲಿ, ಮೋದಿ ಅವರ ಪ್ರಖರ ಟೀಕಾಕಾರ ರಾಹುಲ್ ಗಾಂಧಿ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಮೋದಿ ಅವರಿಗೆ ವಿರುದ್ಧವಾಗಿ ರಾಹುಲ್ ಅವರನ್ನೇ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಮಾಡುವ ಬಗ್ಗೆ ತೆಗೆದುಕೊಳ್ಳಬೇಕಾದ ನಿರ್ಣಯವನ್ನು ಮುಂದೂಡಲಾಗಿದೆ.












Click it and Unblock the Notifications