ಕುಂಭಮೇಳ: ಹಾರ್ವರ್ಡ್ ಸಂಶೋಧಕರಿಗೆ ಕಾಶಿ
ನವದೆಹಲಿ, ಜ.19: ಅಲಹಾಬಾದ್ ಬಳಿ ಪವಿತ್ರ ಗಂಗಾನದಿಯಲ್ಲಿ ನಡೆಯುವ ಕುಂಭಮೇಳದಲ್ಲಿ ಸ್ನಾನ ಮಾಡುವ ಮೂಲಕ ಭಕ್ತಿಯ ಪರಾಕಾಷ್ಠೆ ತಲುಪುವ ಹಿಂದೂ ಧರ್ಮೀಯರ ಬಗ್ಗೆ ಅಧ್ಯಯನ ಮಾಡುವುದೇ ಒಂದು ಸೊಗಸು, ಸೋಜಿಗ.
ಈ ಮಹಾ ಕುಂಭ ಮೇಳಕ್ಕೆ ಸೇರುವಷ್ಟು ಜನ ಬೇರೆ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲೂ ಕಂಡುಬರುವುದಿಲ್ಲ. ಹಾಗಾಗಿ, 48 ದಿನಗಳ ಕಾಲ ನಡೆಯುವ ಈ ಮಹಾಮೇಳವು ಧರ್ಮ, ಸಮುದಾಯಗಳ ಬಗ್ಗೆ ಅಧ್ಯಯನಕ್ಕೆ ಹೇಳಿ ಮಾಡಿದಂತಿರುತ್ತದೆ. 30 ದಶಲಕ್ಷ ಭಕ್ತರು ಈಗಾಗಲೇ ಗಂಗಾ-ಯಮುನಾ ನದಿ ತಟದತ್ತ ಹರಿದುಬಂದಿದ್ದಾರೆ. ಅಷ್ಟೇ ಅಲ್ಲ. ಹಾರ್ವರ್ಡ್ ಯೂನಿವರ್ಸಿಟಿ ಸಂಶೋಧಕರೂ ಇಲ್ಲಿ ಈಗಾಗಲೇ ಬೀಡುಬಿಟ್ಟಿದ್ದಾರೆ.

ಮಹಾ ಕುಂಭಮೇಳವು ಪಾಶ್ಚಿಮಾತ್ಯ ದೇಶಗಳ ಮಾಧ್ಯಮಗಳಲ್ಲಿ ತಪ್ಪದೇ ಸ್ಥಾನ ಪಡೆಯುತ್ತದೆ. ವಿಮಾನ, ಟ್ರೈನು, ಬಸ್ಸು ಹೀಗೆ ಎಲ್ಲ ಸಾರಿಗೆ ಮೂಲಕವೂ ಭಕ್ತರ ದಂಡು ಇಲ್ಲಿಗೆ ಹರಿದುಬರುತ್ತದೆ. ಶಾಂಘೈ, ನ್ಯೂಯಾರ್ಕ್ ನಗರಗಳಲ್ಲಿರುವಷ್ಟೇ ಜನ ಸಂಖ್ಯೆಗಿಂತ ಹೆಚ್ಚಿನ ಜನರನ್ನು ಇಲ್ಲಿ ಕಾಣಬಹುದು. 2001ರಲ್ಲಿ 1,495.31 ಹೆಕ್ಟೇರ್ ಪ್ರದೇಶದಲ್ಲಿ ಜಮಾಯಿಸುತ್ತಿದ್ದ ಭಕ್ತರು ಈಗ 1936.56 ಹೆಕ್ಟೇರ್ ಪ್ರದೇಶದಲ್ಲಿ ಕಾಣಸಿಗುತ್ತಾರೆ.
ಮಹಾ ಕುಂಭಮೇಳ ವೇಳೆ ಇಷ್ಟೊಂದು ಜನ ಕಂಡುಬಂದರೂ ಸ್ಥಳೀಯ ಆಡಳಿತವು ಇಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಿರುವುದು, ಸಾರ್ವಜನಿಕ ಆರೋಗ್ಯ, ವಸತಿ ಸಮಸ್ಯೆ ತಲೆತೋರದಂತೆ ಎಚ್ಚರ ವಹಿಸುವುದು, ನೈರ್ಮಲ್ಯ ಕಾಪಾಡುವುದು ಇವೇ ಮುಂತಾದ ಸಮುದಾಯ ಸೇವೆಗಳು ಹಾರ್ವರ್ಡ್ ಯೂನಿವರ್ಸಿಟಿ ಸಂಶೋಧಕರಿಗೆ ಅಪೂರ್ವ/ಅಮೂಲ್ಯ ಅಧ್ಯಯನ ವಿಷಯಗಳಾಗಿವೆ ಎಂದು Harvard South Asia Instituteನ ನಿರ್ದೇಶಕಿ ಮೀನಾ ಹ್ಯೂವೆಟ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಪುರಾತನ ಧಾರ್ಮಿಕ ಆಚರಣೆಗೆ ಇತ್ತೀಚೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶವೂ ಢಾಳಾಗಿ ಕಂಡುಬರುತ್ತಿದೆ. ಮೊಬೈಲ್ ಫೋನ್ ಸೇರಿದಂತೆ ಇಂಟರ್ನೆಟ್ ಬಳಕೆ ಇಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದು ಇಲ್ಲಿನ ಜನಜಂಗುಳಿಗೆ ಹೇಗೆ ವರವಾಗಿ ಪರಿಣಮಿಸಿದೆಯೇ ಹಾಗೆಯೇ ಇಂತಹ ಮಾಹಿತಿಯನ್ನು ಕಲೆ ಹಾಕುತ್ತಾ ಅವುಗಳ ಸುತ್ತ ಅಧ್ಯಯನ ಕೈಗೊಳ್ಳುವ ಮಂದಿಗೂ ವರವಾಗಿರುತ್ತದೆ ಎಂಬುದು ನಿರ್ದೇಶಕಿ ಮೀನಾ ಹ್ಯೂವೆಟ್ ಅವರ ಅನಿಸಿಕೆ.












Click it and Unblock the Notifications