ಟ್ರೈನ್ ಅಪಹರಿಸಿ, ಅಪಾರ್ಟ್ಮೆಂಟಿಗೆ ಗುದ್ದಿದ ಯುವತಿ
ಲಂಡನ್, ಜ.16: ಅವಳು 23 ವರ್ಷದ ಯುವತಿ. ಅದೇನಾಯಿತೋ ಅವಳಿಗೆ ನಿಲ್ದಾಣದಲ್ಲಿ ನಿಂತಿದ್ದ ಟ್ರೈನ್ ಅನ್ನು ಅಪಹರಿಸಿದವಳೆ ಕೊನೆಗೆ ಅದನ್ನು ನಿಯಂತ್ರಿಸಲು ಬಾರದೆ ಸೀದಾ ಅಪಾರ್ಟ್ ಮೆಂಟಿಗೆ ಗುದ್ದಿದ್ದಾಳೆ. ಸದ್ಯ ಯಾರಿಗೇನೂ ಆಗಿಲ್ಲ. ಅಪಾರ್ಟ್ ಮೆಂಟಿನಲ್ಲಿ ಸವಿ ನಿದ್ದೆಯಲ್ಲಿದ್ದ ನಾಲ್ಕಾರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆಯಷ್ಟೇ.
ಸ್ವೀಡನ್ನಿನ ಸ್ಟಾಕ್ ಹೋಂನಲ್ಲಿ ನಿನ್ನೆ ಮಂಗಳವಾರ ಬೆಳಗ್ಗೆ ಈ ವಿಚಿತ್ರ ಘಟನೆ ನಡೆದಿದೆ. ಅದೇನು ಮಕ್ಕಳಾಟದ ಟ್ರೈನು ಅಂದುಕೊಂಡಳೋ ಏನೋ. ಸರಿ ಟ್ರೈನನ್ನು ಅಪಹರಿಸಿದವಳೇ ಸ್ಟಾರ್ಟ್ ಮಾಡಿದ್ದಾಳೆ. ಅದೂ ಅವಳ ಹಾಗೆ ಹುಚ್ಚುಕುದುರೆಯಂತೆ ಸ್ಪೀಡಾಗಿ ಚಲಿಸಿದೆ.

ನಿಲ್ದಾಣದಲ್ಲಿ ಹಳಿಯ ಕೊನೆಗೆ ಬಂದ ಟ್ರೈನಿಗೆ ಮುಂದೆ ಎತ್ತ ಸಾಗಬೇಕೋ ತಿಳಿಯದಾಗಿದೆ. ಇತ್ತ ಈ ಯುವತಿಗೂ ಅದನ್ನು ನಿಲ್ಲಸುವುದು ಹೇಗೆ ಎಂಬುದೇ ಚಿಂತೆಯಾಗಿದೆ. ಈ ಮಧ್ಯೆ ಟ್ರೈನು ಹಳಿಯನ್ನು ಬಿಟ್ಟು ಎದುರಿಗಿದ್ದ ಕಟ್ಟಡದತ್ತ ನುಗ್ಗಿದೆ.
ಕೊನೆಗೆ ಆ ಯುವತಿಯನ್ನು ಅವಶೇಷಗಳಡಿಯಿಂದ ಹೊರತೆಗೆಯಲು ಅಗ್ನಿಶಾಮಕ ದಳದವರು ಸುಮಾರು 2 ಗಂಟೆ ಕಾಲ ಶ್ರಮಿಸಿದರು. ಅವಳಿಗೂ ಗಾಯಗಳಾಗಿದ್ದವು. ತಕ್ಷಣ ಅವಳನ್ನು ವಿಮಾನದ ಮೂಲಕ ಹೊತ್ತೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಷ್ಟಕ್ಕೂ ಆ ಯುವತಿ ಹಾಗೇಕೆ ಮಾಡಿದಳಪ್ಪಾ ಅಂದರೆ ಅವಳು ಆ ಟ್ರೈನಿನಲ್ಲಿ ಕ್ಲೀನಿಂಗ್ ಮಾಡುವವಳು. ಆದೇನನ್ನಿಸಿತೋ ಏನೋ ಯಾರಿಗೂ ಹೇಳದೆ ಕೇಳದೆ ನಿಂತಿದ್ದ ರೈಲನ್ನು ಓಡಿಸಿಬಿಟ್ಟಿದ್ದಾಳೆ. 'ಟ್ರೈನ್ ಅಪಹರಣವಾಗಿದೆ ಎಂಬ ಸುದ್ದಿ ಬಂದಿತು. ಆದರೆ ಮರುಕ್ಷಣವೇ ಅದು ಅಪಘಾತಕ್ಕೀಡಾಗಿರುವ ಸುದ್ದಿಯೂ ಬಂತು. ಸದ್ಯ ಹೆಚ್ಚಿನ ಅನಾಹುತ ಆಗಿಲ್ವಲ್ಲಾ' ಎಂದು ರೈಲ್ವೆ ಅಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ.












Click it and Unblock the Notifications