ಬಳ್ಳಾರಿ: ಜನಾರ್ದನ ರೆಡ್ಡಿಗೆ ಇಂದು 47ನೇ ಹುಟ್ಟುಹಬ್ಬ

ಜನವರಿ 11, 2013ಕ್ಕೆ ಜನಾರ್ದನ ರೆಡ್ಡಿ 47ನೇ ಹುಟ್ಟು ಹಬ್ಬ ಆಚರಿಸುತ್ತಿದ್ದು, ಸತತ ಎರಡನೇ ವರ್ಷವೂ ಹೈದರಾಬಾದಿನ ಜೈಲಿನಲ್ಲಿ ಕುಟುಂಬ ವರ್ಗದ ಜತೆ ಮತ್ತೊಂದು ಭಾವೋದ್ವೇಗದ ಶುಭಾಶಯ ವಿನಿಮಯವಾಗಲಿದೆ.
ಚುನಾವಣೆ ವರ್ಷದಲ್ಲಿ ಮೇರೆ ಮೀರಿದ ಉತ್ಸಾಹ : ಇದೇ ವೇಳೆ, ಜನಾರ್ದನ ರೆಡ್ಡಿ ಜೈಲು ಪಾಲಾಗಿ ಒಂದೂವರೆ ವರುಷ ಕಳೆದಿದೆ. ಆದರೆ ಈಗ ಚುನಾವಣೆ ವರ್ಷದಲ್ಲಿ ರೆಡ್ಡಿ ಅಭಿಮಾನಿಗಳು ನೂತನ ಬಿಎಸ್‌ಆರ್ ಪಕ್ಷದ ಕಾರ್ಯಕರ್ತರು ಹೆಚ್ಚು ಉತ್ಸಾಹದಿಂದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.
ಬಳ್ಳಾರಿ ನಗರಾದ್ಯಂತ ರೆಡ್ಡಿಗೆ ಶುಭಾಶಯ ಕೋರುವ ಫ್ಲೆಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿವೆ. ಜೈಲಿನಿಂದ ಹೊರಬರಲೆಂದು ಹೋಮ, ಹವನ, ಬಡವರ್ಗದ ಜನರಿಗೆ ದಾನ ನೀಡುವ ಕಾರ್ಯಕ್ರಮವನ್ನು ಬಿಎಸ್‌ಆರ್ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿದೆ.
ರೆಡ್ಡಿಗೆ ಶುಭಾಶಯ ಹಾರೈಸಲು ರೆಡ್ಡಿ ಕುಟುಂಬವರ್ಗ ಹೈದ್ರಾಬಾದ್‌ಗೆ ತೆರಳಲಿದೆ. ಆಪ್ತ ಶ್ರೀರಾಮುಲು ಸಹ ಶುಭಾಶಯ ಕೋರಲು ಹೈದರಾಬಾದಿಗೆ ತೆರಳಿದ್ದಾರೆ. ಸಹೋದರ ಸೋಮಶೇಖರ ರೆಡ್ಡಿ ಸೇರಿದಂತೆ ಇನ್ನಿತರರು ನಗರದಲ್ಲೇ ಆಚರಿಸಲಿದ್ದಾರೆ ಎನ್ನಲಾಗಿದೆ.
2011ರ ಜನವರಿ 11ರಂದು ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ಸರಿಯಾಗಿ ಬಳ್ಳಾರಿ ನಗರದಲ್ಲಿ ರಾಯಲ್ ಸರ್ಕಲ್ಲಿನಲ್ಲಿ ರೆಡ್ಡಿ ದೊಡ್ಡ ಕೇಕ್ ಕಟ್ ಮಾಡಿ, 45ನೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ್ದರು. ತಮ್ಮ ತಾಯಿಯ ಹೆಸರಿನ 'ರುಕ್ಮಣ್ಣಮ್ಮ ವೃದ್ಧಾಶ್ರಮದಲ್ಲಿ' ಕೆಲ ಹೊತ್ತು ಕಳೆದಿದ್ದರು. ಮನೆಮಂದಿಯೆಲ್ಲ ಅತ್ಯಂತ ಸಂತಸದ ಹುಟ್ಟುಹಬ್ಬವಾಗಿತ್ತು. ಅದೇ ಕೊನೆ. ಅದೇ ವರ್ಷದಲ್ಲಿ ಜೈಲು ಪಾಲಾದರು.
2012 ಜನವರಿ 11ರಂದು ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ, ಮಗ ಕಿರೀಟಿ, ಮಗಳು ಬ್ರಹ್ಮಿಣಿ, ಅತ್ತೆ, ಮಾವ ಹಾಗೂ ಕುಟುಂಬ ವರ್ಗ ಎಲ್ಲರೂ ಜೈಲಿಗೆ ಹೋಗಿ ಶುಭಾಶಯ ಕೋರಿಬಂದಿದ್ದರು. ಗಣಿ ಅಕ್ರಮ ಆರೋಪದಲ್ಲಿ 2011, ಸೆ. 5ರಂದು ಸಿಬಿಐ ಜನಾರ್ದನರೆಡ್ಡಿ ಅವರನ್ನು ಬಂಧಿಸಿತ್ತು.












Click it and Unblock the Notifications