ಇನಿಯನಿಗಾಗಿ ಗಂಡನನ್ನು ಕೊಲ್ಲಿಸಿದ್ದ ಸುಂದರಿ ಹಂತಕಿ

ಈ ಘಟನೆಗೆ ಸಂಬಂಧಿಸಿದಂತೆ ಸುಂದರಿ ಹಂತಕಿ ಭಾಗ್ಯಲಕ್ಷ್ಮಿ (27), ಆಕೆಯ ಪ್ರಿಯಕರ ಚೆಲುವರಾಜು (26) ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದ ಆತನ ಸ್ನೇಹಿತರಾದ ಚಂದ್ರಶೇಖರ್, ಮೋಹನ್ ಕುಮಾರ್, ಪ್ರದೀಪ್ ಕುಮಾರ್ ಮತ್ತು ರಾಜುವನ್ನು ಬುಧವಾರ ಬಂಧಿಸಲಾಗಿದೆ.
ನೋಡಲು ಲಕ್ಷಣವಾಗಿರುವ ಭಾಗ್ಯಲಕ್ಷ್ಮಿ, ಹನುಮಂತನಗರ ನಿವಾಸಿಯಾಗಿರುವ ತನ್ನ ಗಂಡ ಶಂಕರ್(38)ನನ್ನು ತನ್ನ ಪ್ರಿಯತಮ ಚೆಲುವರಾಜು ಮತ್ತು ಸುಪಾರಿ ಹಂತಕರ ಸಹಾಯದಿಂದ ಡಿ.29ರಂದು ಕೊಚ್ಚಿಸಿ ಕೊಲ್ಲಿಸಿದ್ದಳು. ವಿದ್ಯಾಪೀಠ ವೃತ್ತದಲ್ಲಿರುವ ಸಿಂಚನ ಎಂಟರ್‌ಪ್ರೈಸಸ್‌ಗೆ ನುಗ್ಗಿ ಶಂಕರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದುಹಾಕಿದ್ದರು.
ಈ ಕುರಿತು ಪ್ರಕರಣ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಯಾವುದೇ ಸುಳಿವು ಸಿಗದಂತೆ ಹತ್ಯೆಗೈದಿದ್ದರಿಂದ ಪೊಲೀಸರಿಗೆ ಇದು ಬಲೇ ಸವಾಲಿನ ಕೇಸಾಗಿತ್ತು. ಮೊಬೈಲ್ ಕರೆಗಳ ಜಾಡು ಹಿಡಿದು ಹೋಗದಿದ್ದರೆ ಕೊಲೆಗಡುಕರು ಸುಲಭವಾಗಿ ಸಿಗುತ್ತಿರಲೂ ಇಲ್ಲ.
ರೋಚಕ ಹಿನ್ನೆಲೆ : ಭಾಗ್ಯಲಕ್ಷ್ಮಿ ಮತ್ತು ಶಂಕರ್ 2006ರಲ್ಲಿ ಮದುವೆಯಾಗಿದ್ದರು. ಅವರಿಗೆ 5 ವರ್ಷದ ಮಗಳು ಇದ್ದಾಳೆ. ಸಂಸಾರ ಸುಗಮವಾಗಿ ಸಾಗಿದ್ದರೂ ಹಳೆಯ ಗೆಳೆತನವನ್ನು ಭಾಗ್ಯಲಕ್ಷ್ಮಿ ಮರೆತಿರಲಿಲ್ಲ. ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಸ್ನೇಹಿತನಾಗಿದ್ದ ಚೆಲುವರಾಜು ಜೊತೆ ಕಳೆದ ಮೂರು ವರ್ಷಗಳಿಂದ ಭಾಗ್ಯಲಕ್ಷ್ಮಿಗೆ ಅನೈತಿಕ ಸಂಬಂಧ ಬೆಳೆದುಬಿಟ್ಟಿತ್ತು.
ಇಬ್ಬರೂ ಕದ್ದುಮುಚ್ಚಿ ಭೇಟಿಯಾಗುತ್ತಿದ್ದುದು ಗಂಡನಿಗೆ ಗೊತ್ತಾಗಿ ದಂಪತಿಗಳ ನಡುವೆ ಭಾರೀ ಜಗಳ ನಡೆದಿತ್ತು. ದಾಂಪತ್ಯದಲ್ಲಿ ಬಿರುಕು ಮೂಡಿಸಿದ ಪ್ರಿಯಕರನನ್ನು ಕರೆದು ಬುದ್ಧಿವಾದ ಹೇಳಿ ಶಂಕರ್ ಕಳಿಸಿದ್ದು ಭಾಗ್ಯಲಕ್ಷ್ಮಿಯನ್ನು ಕೆರಳಿಸಿಬಿಟ್ಟಿತು. ಆಕೆಗೆ ಗಂಡ ಮತ್ತು ಮುದ್ದಿನ ಮಗಳಿಗಿಂತ ಭಂಡ ಪ್ರಿಯತಮನೇ ಬೇಕಾದ.
ಇದರಿಂದ ರೊಚ್ಚಿಗೆದ್ದ ಭಾಗ್ಯಲಕ್ಷ್ಮಿ ಇನಿಯನ ಜೊತೆ ಸೇರಿ ಗಂಡನನ್ನೇ ಮುಗಿಸಿಹಾಕಲು ಸ್ಕೆಚ್ ಹಾಕಿದ್ದಾಳೆ. ನಂತರ ಡಿ.29ರಂದು ಶಂಕರ್ ಕಚೇರಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಕತ್ತರಿಸಿ ಕೊಲೆ ಮಾಡಿದ್ದರು ಮತ್ತು ತಲೆಮರೆಸಿಕೊಂಡಿದ್ದರು. ಭಾರೀ ಕಗ್ಗಂಟಾಗಿದ್ದ ಈ ಪ್ರಕರಣವನ್ನು ಭೇದಿಸಲು ಚಾಮರಾಜನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಜೇಗರಕಲ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.
ಆರಂಭದಲ್ಲಿ ಹಳೆ ವೈಷಮ್ಯದಿಂದಾಗಿ ಶಂಕರ್ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಕೊಲೆ ನಡೆದ ಏಳು ದಿನಗಳ ಹಿಂದೆ ನೇಮಕವಾಗಿದ್ದ ಸಹಾಯಕನ ವಿಚಾರಣೆ ನಡೆಸಿದಾಗ ಕೂಡ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರ ಹೆಂಡತಿಯನ್ನು ವಿಚಾರಣೆಗೆ ಗುರಿಪಡಿಸಿದಾಗ ಕೊಲೆಯ ಸುಳಿವು ಪೊಲೀಸರಿಗೆ ಸಿಕ್ಕಿದೆ.
ಹಂತಕಿ ಸಿಕ್ಕಿದ್ದು ಹೇಗೆ? : ಆಕೆಯ ಮೊಬೈಲಿನಿಂದ ಹೋದ ಕರೆಗಳ ಜಾಡನ್ನು ಹಿಡಿದು ಹೋದಾಗ ಹೆಚ್ಚಿನ ಕರೆಗಳು ಚೆಲುವರಾಜುಗೆ ಹೋಗಿರುವುದು ತಿಳಿದುಬಂದಿದೆ. ಅನುಮಾನ ದಟ್ಟವಾದ ಕೂಡಲೆ ಭಾಗ್ಯಲಕ್ಷ್ಮಿಯನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆಯನ್ನು ತೀವ್ರಗೊಳಿಸಿದಾಗ ಹಂತಕಿ ಮೊದಲು ಮಾಹಿತಿ ನೀಡುವಾಗ ತಡಬಡಾಯಿಸಿದ್ದಾಳೆ, ನಂತರ ಎಲ್ಲವನ್ನೂ ಬಾಯಿಬಿಟ್ಟಿದ್ದಾಳೆ.
ಕೆಲ ದಿನಗಳ ಹಿಂದೆ, ಇದೇ ಹನುಮಂತನಗರದಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆರ್ಟಿಓ ಏಜೆಂಟ್‌ನನ್ನು ಆತನ ಹೆಂಡತಿಯೇ ಸುಪಾರಿ ನೀಡಿ ಕೊಲೆ ಮಾಡಿಸಿದ್ದಳು. ಮಂಗಳಾ ಎಂಬಾಕೆ ತನ್ನ ಪ್ರಿಯತಮ ಕಿರಣ್ ಜೊತೆ ಸೇರಿ ಗಂಡ ಕುಮಾರ್‌ನ ಕೊಲೆ ಮಾಡಿಸಿದ್ದಳು. ಕುಮಾರ್‌ನನ್ನು ಕೂಡ ಮಾರಕಾಸ್ತ್ರಗಳಿಂದ ಕೊಚ್ಚಿಹಾಕಲಾಗಿತ್ತು.












Click it and Unblock the Notifications