ಅನೈತಿಕ ಸಂಬಂಧ : ಪತಿ ಹತ್ಯೆಗೆ ಪತ್ನಿ ಸುಪಾರಿ

ಆರ್ಟಿಓ ಏಜೆಂಟ್ ಕುಮಾರ್ ಅವರ ಹತ್ಯೆ ನ.19ರಂದು ಶ್ರೀನಗರದ ಬಸ್ ನಿಲ್ದಾಣದ ಬಳಿ ಬೆಳಗಿನ ಜಾವ ನಡೆದಿತ್ತು. ಕುಮಾರ್ ಅವರು ಸತ್ತಿದ್ದು ಕೊಲೆಯಿಂದಲೋ, ಅಪಘಾತದಿಂದಲೋ ಎಂಬುದು ಖಾತರಿಯಾಗಿರಲಿಲ್ಲ. ಈ ಸಾವಿನ ಬೆನ್ನುಹತ್ತಿದ ಪೊಲೀಸರು, ಮರ್ಡರ್ ಮಿಸ್ಟರಿ ಭೇದಿಸಿ, ಸುಪಾರಿ ಹಂತಕಿ ಹೆಂಡತಿ ಮಂಗಳಾ (25) ಮತ್ತಿತರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಪೊಲೀಸರಿಗೆ ಅಭಿನಂದನೆಗಳು.
ಬಂಧಿತರು : ಕುಮಾರ್ ಪತ್ನಿ ಮಂಗಳಾ, ಆಕೆಯ ಪ್ರಿಯಕರ ಜರಗನಹಳ್ಳಿಯ ಕಿರಣ್ ಕುಮಾರ್ (21), ಅನಿಲ್ ಕುಮಾರ್ ಅಲಿಯಾಸ್ ಅನಿ (21), ಬನಶಂಕರಿಯ ಕೇಶವ ಕುಮಾರ್, ಜರಗನಹಳ್ಳಿಯ ದೀಪು ಮತ್ತು ನಾಗೇಶ.
ಘಟನೆಯ ವಿವರ : ಮಂಗಳಾಳ ತಮ್ಮ ಮೋಹನ್‌ಗೆ ಆಕೆಯ ಪ್ರಿಯತಮ ಕಿರಣ್ ಕುಮಾರ್‌ನ ಅಕ್ಕ ವಿದ್ಯಾಳನ್ನು ಕೊಡಬೇಕೆಂದು ನಿಶ್ಚಯವಾಗಿತ್ತು. ನಿಶ್ಚಿತಾರ್ಥವಾದ ಮೇಲೆ ಅವರು ಇವರ ಮನೆಗೆ ಹೋಗುವುದು, ಇವರು ಅವರ ಮನೆಗೆ ಹೋಗುವುದು ನಡೆಯುತ್ತಿತ್ತು. ಕುಮಾರ್ ಮನೆಗೆ ಬಂದುಹೋಗಿ ಮಾಡುತ್ತಿದ್ದ ಕಿರಣ್ ಮತ್ತು ಮಂಗಳಾ ನಡುವೆ ಸ್ನೇಹ ಚಿಗುರಿದೆ.
ಸ್ನೇಹ ಕ್ರಮೇಣ ಪ್ರೇಮಕ್ಕೆ ತಿರುಗಿ ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದುಬಿಟ್ಟಿದೆ. ಇದು ಗಂಡನಿಗೂ ಗೊತ್ತಾಗಿ ದಂಪತಿಗಳ ನಡುವೆ ಜಗಳ ನಡೆದಿದೆ. ಗಂಡ ಕುಮಾರ್ ಜೊತೆ ಅನ್ಯೋನ್ಯವಾಗಿದ್ದರೂ ಕಾಮ ಆಕೆಯ ಕಣ್ಣುಕಟ್ಟಿಹಾಕಿದೆ. ಗಂಡನಿಗಿಂತ ಪ್ರಿಯತಮನ ಜೊತೆ ಸುಖವಾಗಿರಬಹುದು ಎಂದು ನಿರ್ಧರಿಸಿದ ಮಂಗಳಾ ಗಂಡನನ್ನೇ ತೊಲಗಿಸಿಬಿಡಬೇಕೆಂದು ಸ್ಕೆಚ್ ಹಾಕಿದ್ದಾಳೆ.
ಮಂಗಳಾ ಮತ್ತು ಕಿರಣ್ ಇಬ್ಬರೂ ಸೇರಿ ಕುಮಾರ್ ಹತ್ಯೆಗೆ ಸಂಚು ರೂಪಿಸಿ, ಕಿರಣ್ ಕುಮಾರ್ ಮಾಜಿ ಸಹಪಾಠಿ ಆಟೋ ಚಾಲಕ ಅನಿಲ್ ಕುಮಾರ್‌ಗೆ 3 ಲಕ್ಷ ರು. ಸುಪಾರಿ ಒಪ್ಪಿಸಿದ್ದಾರೆ. ಮತ್ತು ಮುಂಗಡವಾಗಿ 60 ಸಾವಿರ ರು. ನೀಡಿದ್ದಾರೆ. ಕುಮಾರ್ ಹತ್ಯೆ ಮಾಡಲು ಅನಿಲ್, ಕೇಶವ, ದೀಪು ಮತ್ತು ನಾಗೇಶ ಮುಂತಾದವರು ರೆಡಿಯಾಗಿದ್ದಾರೆ.
ನ.19ರಂದು ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು ಸ್ಕೂಟರಿನಲ್ಲಿ ಕುಮಾರ್ ವಾಪಸಾಗುತ್ತಿದ್ದಾಗ ಶ್ರೀನಗರ ಬಸ್ ನಿಲ್ದಾಣದ ಬಳಿ ಅಡ್ಡಗಟ್ಟಿದ ಹಂತಕರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಬಂಧಿತರಿಂದ ಹತ್ಯೆಗೆ ಬಳಸಲಾದ ಕಾರು, ಮಾರಕಾಸ್ತ್ರಗಳು, ಮೊಬೈಲ್‌ಗಳನ್ನು ಹನುಮಂತನಗರ ಪೊಲೀಸರು ವಶಪಡಿಸಿಕೊಂಡಿದ್ದು, ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications