ಉತ್ತರಾಯಣ ಪರ್ವ ಕಾಲದಲಿ ಬಿಎಸ್ವೈ, ಕೃಷ್ಣ ನಡೆಯೇನು?

ಈಗ ಎಲ್ಲರ ಗಮನ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಮತ್ತು ಯಡಿಯೂರಪ್ಪನವರ ಮುಂದಿನ ನಡೆಯ ಮೇಲೆ. ಸಂಕ್ರಾಂತಿ ನಂತರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ ಎಂದು ಎಸ್ ಎಂ ಕೃಷ್ಣ ಹೇಳಿದರೆ, ಸರಕಾರದ ಭವಿಷ್ಯ ಸಂಕ್ರಾಂತಿ ನಂತರ ನಿರ್ಧಾರವಾಗಲಿದೆ ಎಂದು ಯಡಿಯೂರಪ್ಪ ಹೇಳಿಕೆ ನೀಡುತ್ತಿದ್ದಾರೆ.
ವಿದೇಶಾಂಗ ಖಾತೆಗೆ ರಾಜೀನಾಮೆ ನೀಡಿ ರಾಜ್ಯಕ್ಕೆ ವಾಪಾಸಾಗುವಾಗಲೇ ಹೈಕಮಾಂಡ್ ತನ್ನ ಮುಂದಿನ ನಡೆಯನ್ನು ತಿಳಿಸಿಯೇ ಕೃಷ್ಣ ಅವರನ್ನು ರಾಜ್ಯಕ್ಕೆ ಕಳುಹಿಸಿದೆ ಎನ್ನುವುದು ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬರುತ್ತಿರುವ ಮಾತು.
ಕಾಂಗ್ರೆಸ್ ಪಕ್ಷದ ಖುಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ ಸಂಕ್ರಾತಿಯ ನಂತರ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ಪತ್ರಕರ್ತರನ್ನು ತನ್ನ ಮನೆಗೆ ಕರೆದು ಕೃಷ್ಣ ಹೇಳಿಕೆ ನೀಡಿರುವುದು ಅವರ ಮುಂದಿನ ನಡೆಯನ್ನು ಗ್ರಹಿಸದೇ ಇರದಷ್ಟು ದಡ್ಡರಲ್ಲ ಯಾರೂ ಇಲ್ಲಿ.
ಅದ್ದೂರಿ ಸ್ವಾಗತದ ಮೂಲಕ ಬೆಂಗಳೂರು ಆಗಮಿಸಿದ್ದ ಕೃಷ್ಣ ಎರಡು ತಿಂಗಳ ವಿಶ್ರಾಂತಿ ಪಡೆದು, ಟೆನಿಸ್ ಕೋರ್ಟ್ ನಲ್ಲಿ ಕಾಣಿಸಿಕೊಂಡು ನಂತರ ಆದಿಚುಂಚನಗಿರಿ ಮಠಕ್ಕೆ ತೆರಳಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಉದ್ದೇಶದ ಹಿಂದೆ ಪಕ್ಕಾ ರಾಜಕೀಯ ಗೇಮ್ ಪ್ಲಾನ್ ಇದೆ ಎನ್ನುವುದು ಸಾಧಾರಣವಾಗಿ ಗ್ರಹಿಸಬಹುದಾದ ವಿಷಯ.
ಇತ್ತ ಯಡಿಯೂರಪ್ಪ ಅಕ್ಷರಸಃ ಆಡಳಿತ ಬಿಜೆಪಿ ಪಕ್ಷವನ್ನು ಶಿವರಾತ್ರಿ ಜಾಗರಣೆಯಲ್ಲಿ ದೂಡಿದ್ದಾರೆ. ರಾಜೀನಾಮೆ ಪರ್ವ ಬಸವಕಲ್ಯಾಣದಿಂದ ಆರಂಭವಾಗಿದೆ ಎನ್ನುವ ಅವರ ಹೇಳಿಕೆ ಬಿಜೆಪಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದರೆ ತಪ್ಪಾಗಲಾರದು. ಪಕ್ಷದ ಕೆಲ ಕ್ಯಾಬಿನೆಟ್ ದರ್ಜೆ ಸಚಿವರುಗಳ ಡಬಲ್ ಸ್ಟ್ಯಾಂಡರ್ಡ್, ಇನ್ನೂ ಯಡಿಯೂರಪ್ಪ ಬಣದಲ್ಲೇ ಕಾಣಿಸಿಕೊಳ್ಳುತ್ತಿರುವುದು ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಯಡಿಯೂರಪ್ಪ ಅವರದ್ದು ಬರೀ ಬರೀ ಹೆಡ್ ಲೈನ್ ಹೇಳಿಕೆ ಎಂದು ಛೇಡಿಸುತ್ತಿದ್ದ ಪಕ್ಷದ ದೊಡ್ಡ ತಲೆಗಳು, ಈಗ ಸರಕಾರ ಉರುಳಿಸಿದರೆ ಯಡಿಯೂರಪ್ಪನವರನ್ನು ಜನತೆ ಕ್ಷಮಿಸುವುದಿಲ್ಲ ಎಂದು ಹೇಳಿಕೆ ನೀಡುತ್ತಿರುವುದು ಸಂಖ್ಯಾಬಲದಲ್ಲಿ ಬಿಜೆಪಿ ಎಲ್ಲೋ ಎಡವುತ್ತಿದೆ ಎನ್ನುವ ಸಂಶಯ ಜನಸಾಮಾನ್ಯರನ್ನು ಕಾಡದೇ ಇರದು.
ಪಕ್ಷದ ಟ್ರಬಲ್ ಶೂಟರ್ ಎಂದೇ 'ಬಿರುದು' ಪಡೆದಿರುವ ಅರುಣ್ ಜೇಟ್ಲಿ ಬೆಂಗಳೂರಿಗೆ ಬಂದು ಪ್ರಮುಖ ನಾಯಕರಲ್ಲಿ ಚರ್ಚೆ ನಡೆಸಿ ಹೋಗಿರುವುದು ಬಿಜೆಪಿಯಲ್ಲಿ ಎಡವಟ್ಟಾಗಿರುವುದರ ಸೂಚನೆಯೂ ಆಗಿರಬಹುದು.
ಬಯಲುಸೀಮೆ ಪ್ರಾಂತ್ಯದ ನಾಲ್ಕು ಜಿಲ್ಲೆಗಳಲ್ಲಿ ಶ್ರೀರಾಮುಲು ಪಕ್ಷ ದಿನದಿಂದ ದಿನಕ್ಕೆ ಪ್ರಭಲವಾಗಿ ರೂಪುಗೊಳ್ಳುತ್ತಿರುವುದು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಯಡಿಯೂರಪ್ಪ ಅಲೆ ಸಣ್ಣ ಮಟ್ಟದಲ್ಲಿ ತೇಲುತ್ತಿರುವುದು ಬಿಜೆಪಿಗೆ ಸದ್ಯದ ಪರಿಸ್ಥಿತಿಯಲ್ಲಿ ಹಿನ್ನಡೆಯೇ ಸರಿ.
ಸೋನಿಯಾ ಗಾಂಧಿ ಹುಟ್ಟುಹಬ್ಬದ ದಿನದಂದೇ ಕೆಜೆಪಿ ಉದಯವಾಗಿದ್ದು, ಇಬ್ಬರೂ ನಾಯಕರು ಸಂಕ್ರಾಂತಿ ನಂತರ ಕಾದು ನೋಡಿ ಎನ್ನುವ ಹೇಳಿಕೆ ಕಾಕತಾಳೀಯವೋ ಅಥವಾ ಉದ್ದೇಶಪೂರ್ವಕವೋ. ಪ್ರಭಾವಿ ನಾಯಕರಾಗಿರುವ ಕೃಷ್ಣ ಮತ್ತು ಬಿಎಸ್ವೈ ಇಬ್ಬರಿಗೂ ಅವರದ್ದೇ ಆದ ಜಾತಿ, ಜನ, ಶಾಸಕರ ಮತ್ತು ಕಾರ್ಯಕರ್ತರ ಬೆಂಬಲವಿರುವುದಂತೂ ನಿಜ.
ಯಾರೇ ಕೂಗಾಡಲಿ ರಾಜ್ಯದ ಜನತೆಗೆ ಒಂದಂತೂ ಮನದಟ್ಟಾಗಿದೆ. ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ. ಎಲ್ಲರಿಗೊ ಬೇಕಾಗಿರುವುದು ಒಂದೇ. ಅಧಿಕಾರ.. ಅಧಿಕಾರ.. ಅಧಿಕಾರ..












Click it and Unblock the Notifications