ಬಿಟಿಎಸ್ ಬಸ್ಸಿನಲ್ಲಿ ಲೈಂಗಿಕ ಕಿರುಕುಳ ನಡೆಯಿತಾ?

ಸ್ವತಃ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಪತ್ರಿಕಾಗೋಷ್ಠಿ ನಡೆಸಿದ್ದು, 'ಈ ಬಗ್ಗೆ ತಮಗೇನೂ ಮಾಹಿತಿ ಬಂದಿಲ್ಲ. ಯಾರೂ ದೂರೂ ನೀಡಿಲ್ಲ. ದೂರು ಬಂದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ, 'ಘಟನೆಯ ಬಗ್ಗೆ ತಾವು ಇಂದು ಹಿರಿಯ ಅಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸಲಿದ್ದು, ಘಟನೆಯ ಸತ್ಯಾಸತ್ಯತೆ ಮೇಲೆ ಬೆಳಕು ಚೆಲ್ಲುವುದಾಗಿ' ಯಶವಂತಪುರದ ಬಿಟಿಎಸ್ ವ್ಯವಸ್ಥಾಪಕ ನಾಗರಾಜ್ ಅವರು ಹೇಳಿದ್ದಾರೆ.
ಘಟನೆ ಏನು: ಇಬ್ಬರು ಯುವತಿಯರು ಬಿಟಿಎಸ್ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಂಡಕ್ಟರ್ ಮತ್ತು ಆ ಇಬ್ಬರು ಯುವತಿಯರ ಮಧ್ಯೆ ವಾಗ್ವಾದ ನಡೆದಿದೆ. ಆ ವೇಳೆ ಕಂಡಕ್ಟರ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದಾನೆ ಎಂದು ಯುವತಿಯರು ಹೇಳಿಕೊಂಡಿದ್ದಾರೆ.
ಚಿಲ್ಲರೆ ನೀಡುವ ಬಗ್ಗೆ ಕಂಡಕ್ಟರ್ ಜತೆ ಯುವತಿಯರು ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ. ಆ ಸಂದರ್ಭದಲ್ಲಿ ಬಸ್ಸಿನಲ್ಲಿ ಇತರೆ ಪ್ರಯಾಣಿಕರು ಇದ್ದರಾ? ಎಂಬುದು ತಿಳಿದುಬಂದಿಲ್ಲ.
ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣ ನಗರದಲ್ಲಿರುವ ಬಾಪೂಸಪಾಳ್ಯ ಬಸ್ ನಿಲ್ದಾಣದಲ್ಲಿ ಬುಧವಾರ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇತ್ತೀಚೆಗೆ ದೆಹಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಅತ್ಯಾಚಾರ ಪ್ರಕರಣಗಳು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವುದರಿಂದ ಈ ಘಟನೆಗೆ ದಿಲ್ಲಿ ಮಾಧ್ಯಮಗಳು ಹೆಚ್ಚಿನ ಪ್ರಾಶಸ್ತ್ಯ ನೀಡಿವೆ.












Click it and Unblock the Notifications