ಅರಕಲಗೂಡಿನಲ್ಲಿ ನೆರವೇರಿದ ಮಡೆ ಮಡೆಸ್ನಾನ

ಆ ದಿನ ಎಲ್ಲರ ಕಣ್ಣು ಕುಕ್ಕೆಯಲ್ಲಿ ನಡೆದ ಮಡೆಸ್ನಾನದ ಮೇಲೆಯೇ ಕೇಂದ್ರೀಕೃತವಾಗಿತ್ತು. ಆದರೆ, ಅದೇ ಸಂದರ್ಭದಲ್ಲಿ ಚಂಪಾಷಷ್ಠಿಯಂದು ಹಾಸನ ಜಿಲ್ಲೆಯಲ್ಲಿ ರಾಮನಾಥಪುರ ಶ್ರೀ ಸುಬ್ರಹ್ಮಣ್ಯೇಶ್ವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದಂದು ಸುಬ್ರಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ಕೂಡ ಮಡೆಸ್ನಾನ ನಡೆದಿದೆ.
ದೇಗುಲದ ಮೇಲ್ಭಾಗದಲ್ಲಿ ನೂತನವಾಗಿ ಕಟ್ಟಿಸಲಾಗಿರುವ ಊಟದ ಹಾಲ್ ನಲ್ಲಿ ಸಂಕೇತಿ ಸಮುದಾಯದವರಿಗಾಗಿಯೇ ವ್ಯವಸ್ಥೆಗೊಳಿಸಲಾಗಿದ್ದ ಪ್ರತ್ಯೇಕ ಎಡೆ ಊಟದ ಕಾರ‍್ಯಕ್ರಮದಲ್ಲಿ ಉಂಡ ಎಲೆಗಳ ಮೇಲೆ ಅದೇ ವರ್ಗದ ಜನರು ನಿರಾತಂಕವಾಗಿ ಉರುಳಿದರು. ಮಾಧ್ಯಮ ಪ್ರತಿನಿಧಿಗಳು ಇದನ್ನು ಚಿತ್ರೀಕರಿಸಲೆಂದು ನಿಂತಿದ್ದಾಗ ಅಡ್ಡಿಪಡಿಸಲೆತ್ನಿಸಲಾಯಿತಾದರೂ ಇದು ತಮ್ಮ ವೈಯುಕ್ತಿಕ ಆಚರಣೆಯಾಗಿದ್ದು ಅದು ತಮ್ಮ ಇಷ್ಟಕ್ಕೆ ಬಿಟ್ಟದ್ದು ಎಂದು ಸಮರ್ಥನೆ ಮಾಡಿಕೊಂಡರು.
ಸಾಂಪ್ರದಾಯಿಕ ಪೂಜಾವಿಧಿ : ಸರಿಯಾಗಿ 12 ಗಂಟೆಗೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದ ಮುಂಭಾಗದಲ್ಲಿ ಹೂವು, ಮತ್ತು ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗಿದ್ದ ಬ್ರಹ್ಮ ರಥದಲ್ಲಿ ಉತ್ಸವ ಮೂರ್ತಿಯನ್ನು ಸಾಂಪ್ರಾದಾಯಿಕ ಸೇವೆಗಳನ್ನು ಸಲ್ಲಿಸಿ ಪಲ್ಲಕ್ಕಿಯಲ್ಲಿ ತಂದು ಕೂರಿಸುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಪೂಜೆ ಸಲ್ಲಿಸಿ ರಥ ಎಳೆದು ಧನ್ಯತಾ ಭಾವ ಹೊಂದಿದರು.
ಈ ಸಂದರ್ಭದಲ್ಲಿ ಮದುವೆಯಾದ ನವ ದಂಪತಿಗಳು ಮತ್ತು ಹರಕೆಹೊತ್ತ ಭಕ್ತಾದಿಗಳು ಬಾಳೇಹಣ್ಣು ಮತ್ತು ಜವನವನ್ನು ರಥದ ಮೇಲೆ ಎಸೆದು ತಮ್ಮಭಕ್ತಿಯನ್ನು ಮೆರೆದರು. ಕಾಕತಾಳಿಯವಾಗಿ ಪ್ರತೀ ವರ್ಷವೂ ಗರುಡ ಪಕ್ಷಿಯೂ ನಭದಲ್ಲಿ ಬಂದು ದೇಗುಲ ಮತ್ತು ರಥದ ಪ್ರದಕ್ಷಿಣೆ ಹಾಕುವಂತೆ ಈ ಬಾರಿಯೂ ಪುನರಾವರ್ತಿಸಿದ್ದು ವಿಶೇಷವಾಗಿತ್ತು.
ಭಕ್ತಾದಿಗಳು ಎಳೆದ ರಥದ ಛತ್ರಿ ಚಾಮರಗಳನ್ನು ಹಿಡಿದ ದೇಗುಲದ ಪರಿಚಾರಕರು, ಜನಪದ ಉತ್ಸವ ನೆನಪಿಸುವ ಕೀಲುಗೊಂಬೆ ಮತ್ತು ಕೀಲು ಕುದುರೆಗಳು ಬ್ರಹ್ಮ ರಥದ ಮುಂದೆ ಸಾಗಿ ನೆರೆದಿದ್ದ ಭಕ್ತ ಮನವನ್ನು ತಣಿಸುವಲ್ಲಿ ಯಶಸ್ವಿಯಾದವು. ದೇಗುಲದ ಬದಿಯಲ್ಲೇ ಹರಿಯುವ ಕಾವೇರಿ ಹೊಳೆಯಲ್ಲಿ ಮಿಂದ ಭಕ್ತರು ಸುಬ್ರಹ್ಮಣ್ಯೇಶ್ವರನಿಗೆ ಪೂಜೆ ಮತ್ತು ಹರಕೆಗಳನ್ನು ಸಲ್ಲಿಸಿದರು.
ಮುಜುರಾಯಿ ಇಲಾಖೆಯ ವಶದಲ್ಲಿದ್ದ ಶ್ರೀ ಸುಬ್ರಹ್ಮಣ್ಯೇಶ್ವರ ದೇಗುಲವನ್ನು ಬಿಜೆಪಿ ಸರ್ಕಾರ ಶ್ರೀ ಸುಬ್ರಹ್ಮಣ್ಯ ಮಠಕ್ಕೆ ಡಿನೋಟಿಫೈ ಮಾಡಿದ್ದು ಕಳೆದ ವರ್ಷದಿಂದ ದೇಗುಲವನ್ನು ವಶಕ್ಕೆ ಪಡೆದಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇಗುಲಕ್ಕೆ ಬರುವುದರಿಂದ ವ್ಯವಸ್ಥಿತವಾಗಿ ಸೌಲಭ್ಯಗಳನ್ನು ನೀಡಲಾಗಿತ್ತು. ಪ್ರತೀ ಬಾರಿಯಂತೆ ಈ ಬಾರಿ ಸಾರ್ವತ್ರಿಕ ಪ್ರಸಾದ ವಿನಿಯೋಗದ ವ್ಯವಸ್ಥೆಯಿದ್ದರೂ ಸಹಾ ಇತರೆ ವರ್ಗಗಳು ಪ್ರತ್ಯೇಕವಾಗಿ ಪ್ರಸಾದ ವ್ಯವಸ್ಥೆಯನ್ನು ಮಾಡಿಕೊಂಡಿದ್ದು ಕಾಣಬಂತು.
ಬೆಳಿಗ್ಗೆ 7 ಗಂಟೆ ಸುಮಾರಿಗೆ ಕ್ಷೇತ್ರದ ಶಾಸಕ ಎ ಮಂಜು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ, 8 ಗಂಟೆಗೆ ಹೊಳೆನರಸೀಪುರ ಶಾಸಕ ಎಚ್ ಡಿ ರೇವಣ್ಣ ದೇಗುಲಕ್ಕೆ ಆಗಮಿಸಿ ಪೂಜಾ ಸೇವೆಯಲ್ಲಿ ಪಾಲ್ಗೊಂಡರು. ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿ ಪುನೀತರಾದರು. ರಾಜ್ಯ ಸಾರಿಗೆ ಅರಕಲಗೂಡು ಪಟ್ಟಣದಿಂದ ಪ್ರತೀ ನಿಮಿಷಕ್ಕೊಂದು ಬಸ್ ಗಳನ್ನು ಸಾರ್ವಜನಿಕ ಸೇವೆಗೆ ಒದಗಿಸಿತ್ತು.











Click it and Unblock the Notifications