ತೆನೆಹೊತ್ತ ನಾರಿಯರಿಗೆ ಮಿಸ್ ಆದ ಸೀರೆ ಗಿಫ್ಟ್

ಎಚ್ಡಿಕೆ ಹುಟ್ಟುಹಬ್ಬದ ಅಂಗವಾಗಿ ಹತ್ತು ಸಾವಿರ ಮಹಿಳೆಯರಿಗೆ ಸೀರೆ ವಿತರಿಸುವ ಕಾರ್ಯಕ್ರಮವನ್ನು ಸ್ಥಳೀಯ ಜೆಡಿಎಸ್ ಮುಖಂಡರು ಆಯೋಜಿಸಿದ್ದರು. ಯಲಹಂಕ, ಹೆಸರಘಟ್ಟ, ದಾಸನಪುರ ಹೋಬಳಿಯಿಂದ 'ಸೀರೆ ಕೊಡುತ್ತೇವೆ' ಎಂದು ಸಾವಿರಾರು ಮಹಿಳೆಯರನ್ನು ಕರೆತಂದು ಕಲ್ಯಾಣ ಮಂಟಪದ ಗೇಟಿನೊಳಗೆ ಬೆಳಗ್ಗೆ 9 ಗಂಟೆಗೆ ಬಿಡಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆಯರಿಗೆ ನಿತ್ಯೋತ್ಸವ ಕಲ್ಯಾಣ ಮಂಟಪದಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸಂಜೆಯಾದರೂ ಆರಂಭವಾಗಲೇ ಇಲ್ಲ. ಸೀರೆ ಕೊಡುವವರು ಬಂದೇ ಇಲ್ಲ, ಇತ್ತ ಮಾಜಿ ಮುಖ್ಯಮಂತ್ರಿಗಳೂ ಬಂದಿಲ್ಲ.
ಹಸಿದು ಹೈರಾಣವಾಗಿದ್ದ ಮಹಿಳೆಯರು ಸೀರೆನೂ ಬೇಡ ಏನೂ ಬೇಡ ಎಂದು ಬಂದದಾರಿಗೆ ಸುಂಕವಿಲ್ಲ ಎಂದು ಅಲ್ಲಿಂದ ಹೊರಡಲು ಮುಂದಾದರು. ಆದರೆ ಮಹಿಳೆಯರನ್ನು ಹೊರಬಿಡದೆ ಕಾರ್ಯಕರ್ತರು ಸಬೂಬು ಹೇಳಲು ಆರಂಭಿಸಿದರು.
ದನಗಳಿಗೆ ಹುಲ್ಲು ಹಾಕಬೇಕು, ಮಕ್ಕಳು ಸ್ಕೂಲಿಂದ ಬರುವ ಸಮಯ, ಡೈರಿಗೆ ಹಾಲು ಹಾಕಬೇಕು ಎಂದು ಕಲ್ಯಾಣ ಮಂಟಪದಿಂದ ಮಹಿಳೆಯರು ಹೊರಡಲು ಮುಂದಾದರು. ಆಗ ಧಾವಿಸಿ ಬಂದ ಜೆಡಿಎಸ್ ಕಾರ್ಯಕರ್ತರು ಮಹಿಳೆಯರನ್ನು ಮತ್ತೆ ಒಳಗೆ ಕಳುಹಿಸಿ ಕಲ್ಯಾಣ ಮಂಟಪ ಮತ್ತು ಮಂಟಪದ ಗೇಟಿಗೆ ಬೇಗ ಜಡಿದರು.
ಇದರಿಂದ ರೊಚ್ಚಿಗೆದ್ದ ಮಹಿಳೆಯರು ಬಾಗಿಲು ಮತ್ತು ಗೇಟನ್ನು ಮುರಿದು ಹಾಕಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಹಿಡಿಶಾಪ ಹಾಕಿ ಅಲ್ಲಿಂದ ಕಾಲ್ಕಿತ್ತರು.
ಇತ್ತ 11 ಗಂಟೆಯಿಂದ ಕುಮಾರಸ್ವಾಮಿ ಆಗಮನಕ್ಕೆ ಕಾದು ಕಾದು, ಭಾಷಣ ಮಾಡಿ ಜೆಡಿಎಸ್ ನಾಯಕರು ಸುಸ್ತಾಗಿ ತಲೆ ಮೇಲೆ ಟವಲ್ ಹಾಕಿಕೊಂಡು ವೇದಿಕೆಯಲ್ಲಿ ಕೂತಿದ್ದರು.
11 ಗಂಟೆಗೆ ಬರಬೇಕಾಗಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಂಜೆ ಐದು ಗಂಟೆಗೆ ರಂಗ ಪ್ರವೇಶ ಮಾಡಿದರು. ಆದರೆ ಅಷ್ಟೊತ್ತಿಗಾಗಲೇ ಸೀರೆ ಪಡೆಯಲು ಬಂದಿದ್ದ ಮಹಿಳೆಯರು ತಮ್ಮತಮ್ಮ ಗೂಡು ಸೇರಿದ್ದರು.












Click it and Unblock the Notifications