ಗ್ಯಾಂಗ್ ರೇಪ್ ವಿಚಾರಣೆಗೆ ಹೋದ ಎಸ್ಸೈ ರೇಪ್ ಮಾಡಿಬಿಟ್ಟ

ಫೈಜಾಬಾದ್ ಬಾಗದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. 'ನಿನ್ನ ರೇಪ್ ಪ್ರಕರಣದ ವಿಚಾರಣೆ ನಡೆಸಬೇಕಿದೆ. ಡಿಐಜಿ ಸಾಹೇಬರು ಕರೆದಿದ್ದಾರೆ ಬಾ' ಎಂದು ಪುಸಲಾಯಿಸಿ, ಬಾಧಿತ ಯುವತಿಯನ್ನು ಎಸ್ಸೈ ಮಾನ್ ಸಿಂಗ್ ಹೋಟೆಲಿಗೆ ಕರೆಸಿಕೊಂಡಿದ್ದಾನೆ.
ಅಲ್ಲಿ ವಿಚಾರಣೆಯ ನಾಟಕವಾಡಿದ ಎಸ್ಸೈ ಮಾನ್ ಸಿಂಗ್ ನಂತರ ಯುವತಿಯ ಮೇಲೆ ಅಮಾನುಷ ಅತ್ಯಾಚಾರ ಮಾಡಿದ್ದಾನೆ. ಆರೋಪಿ ಎಸ್ಸೈನನ್ನು ಬಂಧಿಸಲಾಗಿದ್ದು, ಜೈಲಿಗಟ್ಟಲಾಗಿದೆ. ಆರೋಪಿಯು ಅಂಬೇಡ್ಕರ್ ನಗರ್ ಜಿಲ್ಲೆಯ ಅಕ್ಬರಪುರ ಪೊಲೀಸ್ ಠಾಣೆಯಲ್ಲಿ ಹಿರಿಯ ಸಬ್ ಇನ್ಸ್ ಪೆಕ್ಟರ್ ಆಗಿದ್ದಾನೆ.
'ಹೀಗೀಗೆ ಪೊಲೀಸಪ್ಪ ನನ್ನನ್ನು ವಿಚಾರಣೆಗೆಂದು ಕರೆಸಿಕೊಂಡು ಅತ್ಯಾಚಾರ ಮಾಡಿಬಿಟ್ಟಿದ್ದಾನೆ. ಹೋಟೆಲ್ ಪ್ರಿಯಾದಲ್ಲಿ ನನ್ನನ್ನು ಅಕ್ರಮವಾಗಿ ಬಂಧಿಸಿಟ್ಟಿದ್ದಾನೆ. ಸಹಾಯ ಮಾಡು' ಎಂದು ಬಾಧಿತ ಯುವತಿ ತನ್ನ ಗೆಳತಿಗೆ ಎಸ್ಎಂಎಸ್ ಮಾಡಿ ತಿಳಿಸಿದ್ದಳು. ಗೆಳತಿ ತಕ್ಷಣ ಇದನ್ನು ಯುವತಿಯ ತಂದೆ ಗಮನಕ್ಕೆ ತಂದಿದ್ದಾಳೆ. ಯುವತಿಯ ಅಪ್ಪ ನೇರವಾಗಿ ಡಿಐಜಿ ಗಮನಕ್ಕೆ ತಂದಿದ್ದಾರೆ.
ತಕ್ಷಣ ಹೋಟೆಲ್ ಮೇಲೆ ದಾಳಿ ಮಾಡಲಾಗಿ ಕಾಮುಕ ಪೊಲೀಸಪ್ಪನ ಹಿಡಿತದಿಂದ ಪೊಲೀಸರು ಯುವತಿಯನ್ನು ಪಾರು ಮಾಡಿದ್ದಾರೆ.
ಅದಕ್ಕೂ ಮುನ್ನ, ಯುವತಿಯನ್ನು ಕೆಲವು ದಿನಗಳ ಹಿಂದೆ ಮೂವರು ಯುವಕರು ಗ್ಯಾಂಗ್ ರೇಪ್ ಮಾಡಿದ್ದರು. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಎಸ್ಸೈ ಮಾನ್ ಸಿಂಗ್ ಇದರ ವಿಚಾರಣೆ ನಡೆಸುತ್ತಿದ್ದ.












Click it and Unblock the Notifications