ರಿಯಾಲಿಟಿ ಶೋ: 12.12.12ರಂದೇ ಸತ್ತ ಭೂಪ!
ಗಾಜಿಯಾಬಾದ್, ಡಿ.14: ಹುಚ್ಚಿಗೆ ಸಾವಿರ ಮುಖಗಳಂತೆ. ಆದರೆ ಇಂತಹಾ ಹುಚ್ಚೂ ಇರುತ್ತದಾ!? ಜನನ-ಮರಣದ ವಿಚಾರದಲ್ಲಿ ದೇವರನ್ನೇ ಸೋಲಿಸುತ್ತೇನೆ ಎಂಬ ಹುಚ್ಚು ವಾದಕ್ಕೆ ಸಿಲುಕಿ ವ್ಯಕ್ತಿಯೊಬ್ಬ ತನ್ನ ಅಮೂಲ್ಯವಾದ ಜೀವನವನ್ನೇ ಕೊನೆಗಾಣಿಸಿಕೊಂಡಿದ್ದಾನೆ. ಜತೆಗೆ ಹೆಂಡ್ತಿ-ಮಕ್ಕಳನ್ನೂ ಅನಾಥವಾಗಿಸಿದ್ದಾನೆ.
ಜೀವನವನ್ನು ಮತ್ತಷ್ಟು ಸುಂದರಗೊಳಿಸಲು ನಿನ್ನೆ ಜನ ನೂರೆಂಟು ಆಚರಣೆಗಳನ್ನು ಮಾಡಿದ್ದಾರೆ. ಅದೂ ಒಂದು ರೀತಿಯ ಹುಚ್ಚೇ. ಆದರೆ ಉತ್ತರಪ್ರದೇಶದ ವ್ಯಕ್ತಿಯೊಬ್ಬ ಅದಕ್ಕಿಂತ ಭೀಕರವಾದ/ಮಾರಕವಾದ ಹುಚ್ಚಿಗೆ ತನು ಮನ ಅರ್ಪಿಸಿ, ಇಹಲೋಕ ತ್ಯಜಿಸಿದ್ದಾನೆ.

ರಿಯಾಲಿಟಿ ಶೋ:ದೇವರು ನನಗೆ ಯಾವಾಗ ಸಾವು ಬರೆದಿದ್ದಾನೋ ಗೊತ್ತಿಲ್ಲ. ಆದರೆ ನನ್ನ ಸಾವಿನ ಘಳಿಗೆಯನ್ನು ನಾನೇ ನಿರ್ಧರಿಸಿ, ಕಾಣದ ಆ ದೇವರನ್ನು ಸೋಲಿಸುತ್ತೇನೆ ಎಂದು ಹೇಳಿಕೊಂಡ ಹುಂಬನೊಬ್ಬ ಏನು ಮಾಡಿದ ಗೊತ್ತಾ... ಜನರೆಲ್ಲ ನೋಡುತ್ತಿರುವಾಗಲೇ 80 ಅಡಿ ಎತ್ತರದ ನೀರಿನ ಟ್ಯಾಂಕ್ ಹತ್ತಿ ಅಲ್ಲಿಂದ 12-12-12ರಂದು 12.12.12 ಸಮಯಕ್ಕೆ ಸರಿಯಾಗಿ ಹಾರಿ ಪ್ರಾಣಬಿಟ್ಟಿದ್ದಾನೆ.
ಹೀಗೆ ದೇವರನ್ನು ಸೋಲಿಸುವ ಹುಚ್ಚಾಟಕ್ಕೆ ಬಲಿಯಾದವನು 40 ವರ್ಷದ ಕೃಷ್ಣ ಪಾಲ್. ದೆಹಲಿ ಸಮೀಪವಿರುವ ಗಾಜಿಯಾಬಾದಿನ ವಿಜಯನಗರದ ಪ್ರತಾಪ್ ವಿಹಾರದಲ್ಲಿ ಈ ಘಟನೆ ನಡೆದಿದೆ. ಈತ ತನ್ನ ಮರಣಪತ್ರ ಸಾವಿನ ವಿಷಯದಲ್ಲಿ ದೇವರನ್ನು ಸೋಲಿಸುವ ಬಗ್ಗೆ 12 ಪುಟಗಳಲ್ಲಿ ಓತಪ್ರೋತವಾಗಿ ಬರೆದುಕೊಂಡಿದ್ದಾನೆ.
ತನ್ನ ಸಾವನ್ನು ನಿರ್ಧರಿಸುವವನು ದೇವರಲ್ಲ. ತನ್ನ ಸಾವಿಗೆ ತಾನೇ ಅಧಿಕಾರಿ ಎಂದು ಬರೆದಿಟ್ಟಿದ್ದಾನೆ. ಅಂದಹಾಗೆ ತಾನು ಹುಟ್ಟಿದ್ದು 12.12 (1972)ರಲ್ಲಿ ಎಂಬುದೂ ಅವನ ವಾದವಾಗಿತ್ತು. ನರ್ಸರಿ ತೋಟದ ಮಾಲೀಕನಾಗಿದ್ದ ಈ ಅವಿವೇಕಿ ಹೆಂಡತಿ, ಇಬ್ಬರು ಪುತ್ರಿಯರು ಮತ್ತು ಪುತ್ರನನ್ನು ಅನಾಥವಾಗಿಸಿ, ಸಾವಿನ ವಿಷಯದಲ್ಲಿ ದೇವರನ್ನು ಸೋಲಿಸಿ, ಜೀವನದಲ್ಲಿ ಗೆದ್ದಿದ್ದಾನೆ ಅಲ್ಲಲ್ಲ ಸೋತಿದ್ದಾನೆ.












Click it and Unblock the Notifications