ಬಿಜೆಪಿ ಈಶ್ವರಪ್ಪರಗೆ ಕೆಜೆಪಿ ಹಾಲಪ್ಪ ಭರ್ಜರಿ ಸವಾಲ್

ಇನ್ನೂ ಒಂದು ಹೆಜ್ಜೆ ಮುಂದಡಿಯಿಟ್ಟಿರುವ ಬಿಜೆಪಿಯ ಕಳಂಕಿತ ಶಾಸಕ ಹಾಲಪ್ಪ, 'ಬರೀ ವೇದಿಕೆ ಮೇಲೇನು, ಮುಂದಿನ ಚುನಾವಣೆಯಲ್ಲಿ ಕೆಜೆಪಿ ಪಕ್ಷದಿಂದಲೇ ಕಣಕ್ಕಿಳಿಯುತ್ತೇನೆ. ಅದೇನು ಮಾಡ್ಕೋತೀರೋ ಮಾಡ್ಕೊಳ್ಳಿ' ಎಂದು ಭರ್ಜರಿ ಸವಾಲು ಹಾಕಿದ್ದಾರೆ.
ಅಷ್ಟಕ್ಕೇ ಸುಮ್ಮನಾಗದ ಮಾಜಿ ಸಚಿವ ಹರತಾಳು ಹಾಲಪ್ಪ, ತಾವು ಸೊರಬ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿಯೂ ಘೋಷಿಸಿದ್ದಾರೆ.
'ಏನು ಕ್ರಮ ಬೇಕಾದ್ರೂ ಕೈಗೊಳ್ಳಲಿ. ತಲೆ ಕೆಡಿಸಿಕೊಳ್ಳೋಕೇ ಹೋಗೊಲ್ಲ. ಎಲ್ಲವನ್ನೂ ಎದುರಿಸಲು ಸಿದ್ಧ' ಎಂದು ಹಾಲಪ್ಪ ಬಿಜೆಪಿ ಮಂದಿಯತ್ತ ಚಾಟಿ ಬೀಸಿದ್ದಾರೆ. ಇದು ನೇರವಾಗಿ ಶಿವಮೊಗ್ಗದವರೇ ಆದ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ.
'ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಮ್ಮ ನಾಯಕರು. ಅವರ ಮಾರ್ಗದರ್ಶನದಲ್ಲಿಯೇ ಮುನ್ನಡೆಯುತ್ತೇನೆ. ಅವರೊಂದಿಗೇ ಇರುತ್ತೇನೆ. ಆ ಹಿನ್ನೆಲೆಯಲ್ಲಿ ಹಾವೇರಿ ಸಮಾವೇಶದಲ್ಲಿ ಪಾಲ್ಗೊಂಡಿದ್ದೇನೆ. ಯಾರು ಏನು ಬೇಕಾದರು ಮಾಡಿಕೊಳ್ಳಲಿ' ಎಂದು ಹಾಲಪ್ಪ ಸ್ಪಷ್ಟಪಡಿಸಿದ್ದಾರೆ.
'ಕೆಜೆಪಿಯಿಂದಲೇ ಸೊರಬದಲ್ಲಿ ಕಣಕ್ಕಿಳಿಯುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಈ ಕ್ಷೇತ್ರದಿಂದ ನಾನು ಪುನರಾಯ್ಕೆಯಾಗುವುದೂ ನಿಶ್ಚಿತ' ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.











Click it and Unblock the Notifications