ನೇಪಾಳದಲ್ಲಿ ಮಾಗಡಿಯ ಮಹಿಳೆಯ ಯಶೋಗಾಥೆ

ಮೂದಲಿಕೆ, ದೂಷಣೆ, ವ್ಯವಸ್ಥೆ ಎಲ್ಲದಕ್ಕೂ ಸೆಡ್ಡು ಹೊಡೆದು ಆದೇಶದ ಪೌರತ್ವವನ್ನ ಪಡೆದು ಜನಪ್ರತಿನಿಧಿಯಾಗಿ ಜನರಸೇವೆ ಮಾಡುತ್ತಾ ಹೆಣ್ಣೊಬ್ಬೊಳು ಅಸಾಮಾನ್ಯ ಸಾಧನೆಯನ್ನ ಮಾಡಿದ್ದಾಳೆ. ಅವಳೇ ರಾಮನಗರ ಜಿಲ್ಲೆಯ ಮಾಗಡಿ ಗಂಗು ಅಲಿಯಾಸ್ ಈಗಿನ ನೇಪಾಳದ ಜಿಲ್ಲಾ ಪ್ರತಿನಿಧಿ (ಜಿಲ್ಲಾಪಂಚಾಯ್ತಿ ಸದಸ್ಯೆ) ಗಂಗೂದೇವಿ ಖಡಾಯತ್.
ದೂರದ ಪ್ರಯಾಣ, ಕಷ್ಟಕಾರ್ಪಣ್ಯ, ಅವಮಾನಗಳನ್ನ ಮೆಟ್ಟಿನಿಂತು, ದಿಕ್ಕೆಟ್ಟ ನಾಳೆಯನ್ನ ಎದುರು ನೋಡುತ್ತಾ ಕಂಗಾಲಾಗಿ ನಿಂತಿದ್ದ ಗಂಗೂದೇವಿ ಖಡಾಯತ್ ಈಗ ಎಲ್ಲ ವೈರುಧ್ಯಗಳನ್ನು ಮೆಟ್ಟಿನಿಂತಿದ್ದಾರೆ. ಅವಿದ್ಯಾವಂತೆಯಾಗಿದ್ದರೂ ಮಾಗಡಿಯ ಗಡಿ ದಾಟಿ ನೇಪಾಳದೇಶದಲ್ಲಿ ವಿದ್ಯೆ ಕಲಿತು, ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಕಮ್ಯೂನಿಸ್ಟ್ ಪಾರ್ಟಿಯ ಜಿಲ್ಲಾ ಪ್ರತಿನಿಧಿಯಾಗಿ, ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರುನಾಡಿನ ಕುವರಿ ನೇಪಾಳದಲ್ಲಿ ಯಶೋಗಾಥೆ ಸಾಧಿಸಿದ್ದೇ ಒಂದು ಇಂಟರೆಸ್ಟಿಂಗ್ ಸ್ಟೋರಿ.
ಇಂಟರೆಸ್ಟಿಂಗ್ ಸ್ಟೋರಿ : ಗಂಗೂದೇವಿ ಖಡಾಯತ್ ಮೂಲತಃ ರಾಮನಗರ ಜಿಲ್ಲೆ ಮಾಗಡಿಯ ಹೊಸಪೇಟೆಯ ಶನಿಮಹಾತ್ಮದೇವಾಲಯದ ಅರ್ಚಕರ ಮಗಳು. ಹುಟ್ಟಿನಿಂದಲೇ ಬಡತನ ಕಿತ್ತು ತಿನ್ನುತ್ತಿತ್ತು. ಬಡತನದ ನಡುವೆ ಒಡಹುಟ್ಟಿದ 5 ಮಂದಿ ಸಹೋದರಿಯರು, 3 ಮಂದಿ ಸಹೋದರರೊಂದಿಗೆ ಸಂಸಾರದ ಭಾರವನ್ನು ಹೊತ್ತವರು. ಚಿಕ್ಕಂದಿನಿಂದಲೇ ಅಪ್ಪನ ಜೊತೆ ಹಳ್ಳಿ ಹಳ್ಳಿಗಳಲ್ಲಿ ತಿರುಗಿ ದೇವರ ಸೇವೆ ಮಾಡುತ್ತಲೇ ಬದುಕನ್ನ ಕಟ್ಟಿಕೊಂಡಿದ್ದವರು ಗಂಗೂದೇವಿ.
ನಂತರ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೇಪಾಳ ಮೂಲದ ದಿಲ್‌ಬಹದ್ದೂರ್ ಖಡಾಯತ್ ಎಂಬುವವರನ್ನ ಪ್ರೇಮಿಸಿ ವಿವಾಹವಾದರು. ವಿವಾಹವಾದ ನಂತರ ಗಂಗೂದೇವಿಯನ್ನು ತಂದೆ ಮನೆಗೆ ಸೇರಿಸಿಕೊಳ್ಳಲಿಲ್ಲ. ಇತ್ತ ಗಂಡ ಅವರಿವತ್ತಿರ ಒಂದೊಂದು ರೂಪಾಯಿ ಪಡೆದು ದಿನದ ಬದುಕನ್ನ ತಳ್ಳಬೇಕಾಗಿತ್ತು. ಇದು 37 ವರ್ಷಗಳ ಹಿಂದಿನ ಕಥೆ.
ಗಂಡ ಅವರಿವರ ಬಳಿ ಭಿಕ್ಷೆ ಬೇಡುವ ರೀತಿ ಕಂಡ ಸ್ವಾಭಿಮಾನಿ ಗಂಗೂದೇವಿ, ಗಂಜಿ ಕುಡಿದರೂ ಪರ್ವಾಗಿಲ್ಲ ನಿನ್ನೂರಿಗೆ ಹೋಗಿ ವ್ಯವಸಾಯ ಮಾಡೋಣ ನಡಿ ಎಂದು ನೇಪಾಳಕ್ಕೆ ಗಂಡನೊಂದಿಗೆ ತೆರಳಿದರು. ನೇಪಾಳಕ್ಕೆ ಗಂಡನ ಮನೆಗೆ ಹೋಗಿದ್ದೇ ತಡ ನಮ್ಮವಳಲ್ಲವೆಂಬ ಮೂದಲಿಕೆ ಶುರುವಾಯಿತು. ಅಸ್ಪೃಶ್ಯಳಂತೆ ಕಾಣುತ್ತಿದ್ದರು. ಇತ್ತ ಭಾಷೆಯೂ ಬರೋದಿಲ್ಲ, ಅತ್ತ ವಾತಾವರಣವೂ ಸಂಪೂರ್ಣ ಭಿನ್ನವಾಗಿತ್ತು. ಮುದ್ದೆ ಅನ್ನ ತಿನ್ನುತ್ತಿದ್ದ ಗಂಗೂದೇವಿಗೆ ರೊಟ್ಟಿ ತಿಂದು ಬದುಕು ಬಾರವಾಗಿತ್ತು.
ಛಲತೊಟ್ಟು ನಿಂತವಳು ಗಂಗೂದೇವಿ : ಕನಸು ಕಟ್ಟಿಕೊಂಡು ಬಂದಿದ್ದ ಗಂಗೂದೇವಿಗೆ ನೇಪಾಳದ ಗಂಡನ ಮನೆಯ ವಾತಾವರಣ ದಂಗುಬಡಿಸಿತ್ತು. ಆದರೂ ತವರಿಂದ ದೂರವಾಗಿ ಗಂಡನ ಮನೆಯಲ್ಲೇ ಬದುಕು ಕಟ್ಟಿಕೊಳ್ಳಬೇಕೆಂಬ ಛಲತೊಟ್ಟು ನಿಂತವಳು ಗಂಗೂದೇವಿ. ಗಂಗೂದೇವಿಯಲ್ಲಿದ್ದ ಛಲವೇ ಇಂದು ನೇಪಾಳ ಕಮ್ಯೂನಿಸ್ಟ್ ಪಾರ್ಟಿಯ ಜಿಲ್ಲಾ ಪ್ರತಿನಿಧಿ, ಜಿಲ್ಲಾಪಂಚಾಯ್ತಿ ಸದಸ್ಯರ ಮಾದರಿಯ ಜನಪ್ರತಿನಿಧಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ ನೇಪಾಳದಾದ್ಯಾಂತ ಹಲವು ಸಂಘಟನೆಗಳು ಗಂಗೂದೇವಿಯನ್ನ ಗುರುತಿಸಿ "ಲೋಕಪ್ರಿಯ ಗಂಗೂದೇವಿ" ಎಂದು ಬಿರುದು ನೀಡಿ ಸನ್ಮಾನಿಸಿದ್ದಾರೆ.
ಗಂಗೂಬಾಯಿ ಯಶೋಗಾಥೆ ಕೇಳುತ್ತಿದ್ದರೆ ಯಾವುದೋ ಕಾಲ್ಪನಿಕ ಕಥೆ ಕೇಳಿದಂತಾಗುತ್ತಿದೆ. ಆದರೆ ಗಂಗೂದೇವಿಯ ಸಾಧನೆ ಎಲ್ಲವೂ ಸತ್ಯ. ಗಂಗೂದೇವಿ ತವರಿಗೂ ಮರೆತು ಹೋಗಿದ್ದಳು. ಗಂಗೂಬಾಯಿ ಬದುಕಿದ್ದಾಳೋ ಸತ್ತಿದ್ದಾಳೋ ಅನ್ನೋದು ಗೊತ್ತಿರಲಿಲ್ಲ. ನೇಪಾಳಕ್ಕೆ ಹೋಗಿ 37 ವರ್ಷದ ನಂತರ ಈಗ ತಮ್ಮನ ಮದುವೆಗಾಗಿ ಮತ್ತೆ ತಾಯ್ನಾಡಿಗೆ ಬಂದಿದ್ದಾರೆ. ನೇಪಾಳಕ್ಕೆ ಹೋದಾಗಿನಿಂದ ಕನ್ನಡದಲ್ಲಿ ಮಾತನಾಡದ ಗಂಗೂದೇವಿ ಕನ್ನಡವನ್ನ ಸ್ವಲ್ಪ ಮರೆತಿದ್ದರೂ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ.
ಗಂಗೂದೇವಿಗೆ 2 ಮಕ್ಕಳಾಗುತ್ತಿದ್ದಂತೆ ಗಂಡ ದಿಲ್‌ಬಹದ್ದೂರ್ ಪತ್ನಿ ಮಕ್ಕಳನ್ನು ಬಿಟ್ಟು ಭಾರತಕ್ಕೆ ವಾಪಸ್ಸಾಗಿಬಿಟ್ಟ. ನಂತರ ಬದುಕಿನ ಭಾರ ಹೆಚ್ಚಾದರೂ ಎದೆಗುಂದದ ಗಂಗೂದೇವಿ ವ್ಯವಸಾಯ ಆರಂಭಿಸಿದರು. ವಿದ್ಯೆ ಕಲಿತಳು, ಭಾಷೆ ಕಲಿತಳು, ಜೀವನ ಶೈಲಿಗೆ ಹೊಂದಿಕೊಂಡಳು. ಬದಲಾವಣೆ ಕಂಡ ಗ್ರಾಮದವರು ಒಬ್ಬೊಬ್ಬರಾಗಿ ಗಂಗೂದೇವಿಯೊಂದಿಗೆ ಕೈಜೋಡಿಸಿದರು. ಇದರಿಂದ ಸ್ಪೂರ್ತಿಗೊಂಡ ಗಂಗೂದೇವಿ ಸಂಪ್ರದಾಯ, ಕಟ್ಟಳೆಗಳ ಬಂಧನದಲ್ಲಿ ಸಿಲುಕಿದ್ದ ಹಲವು ಹೆಣ್ಣುಮಕ್ಕಳಿಗೆ ಧೈರ್ಯ ತುಂಬಿ ಮುಖ್ಯವಾಹಿನಿಗೆ ಕರೆತರುವ ಸಾಮಾಜಿಕ ಕಾರ್ಯಕರ್ತೆಯಾಗಿ ರೂಪುಗೊಂಡಿದ್ದಾಳೆ. ಆರೋಗ್ಯ , ಶಿಕ್ಷಣ, ಕೃಷಿ, ಮಹಿಳೆಯ ಪರವಾದ ಹೋರಾಟ, ಕಷ್ಟದಲ್ಲಿರುವ ಮಹಿಳೆಯರ ಬದುಕಿಗೆ ಆಸರೆ ಮತ್ತು ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿದಿರುವ ಜತೆಗೆ ಸಾಮಾಜಿಕ ಕ್ರಾಂತಿ ಮೂಡಿಸುತ್ತಿರುವ ಗಂಗೂದೇವಿ.












Click it and Unblock the Notifications