ಯಡಿಯೂರಪ್ಪ ಸ್ವಾರ್ಥ ರಾಜಕಾರಣಿ, ಕೆಜೆಪಿಗೆ ಏಳಿಗೆಯಿಲ್ಲ

ಯಡಿಯೂರಪ್ಪ ಅವರು ಇನ್ನೂ ಭ್ರಷ್ಟಾಚಾರ ರಾಜಕಾರಣಿ ಎಂದೇ ಪರಿಗಣಿಸಲಾಗುತ್ತದೆ. ಅವರು ಇನ್ನೂ ಪೂರ್ಣಪ್ರಮಾಣವಾಗಿ ಆರೋಪಮುಕ್ತರಾಗಿಲ್ಲ ಎಂಬುದನ್ನು ನೆನಪಿಡಿ.
ಅವರು ಪಕ್ಷದ ಸಿದ್ಧಾಂತಗಳನ್ನು ಮರೆತು ಸ್ವಹಿತಾಸಕ್ತಿ ಸಾಧಿಸುವುದಕ್ಕಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಎಸೆಗಿದರು. ಇದು ಅವರಿಗೆ ಮುಳುವಾಯಿತು. ಅವರ ದೀರ್ಘಕಾಲದ ರಾಜಕೀಯ ಅನುಭವಕ್ಕೆ ಇದರಿಂದ ಬೆಲೆ ಇಲ್ಲದ್ದಂತಾಯಿತು. ಹೀಗಾಗಿ ಅವರು ಪಕ್ಷ ತೊರೆಯಬೇಕಾಯಿತು.
ಬಿಜೆಪಿಯಿಂದ ಹೊರ ನಡೆದಿದ್ದು, ಅವರ ಸ್ವಂತ ಕೃತ್ಯಗಳಿಂದಲೇ ಹೊರತೂ ಯಾರು ಅವರನ್ನು ಹೊರಗೆ ಕಳಿಸಲಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರು ಪಕ್ಷ ತೊರೆದು ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸಿರುವುದರಿಂದ ಬಿಜೆಪಿಗೆ ಯಾವುದೇ ಹಾನಿಯಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಪಕ್ಷದ ಹಿರಿಯ ಮುಖಂಡ ಕೇಶು ಭಾಯಿ ಪಾಟೇಲ್, ಎಕೆ ಸುಬ್ಬಯ್ಯ ಸೇರಿದಂತೆ ಹಲವು ನಾಯಕರು ಬಿಜೆಪಿಯನ್ನು ತೊರೆದಿದ್ದಾರೆ.
ಬಿಜೆಪಿ ಇದರಿಂದ ನೆಲಕಚ್ಚಲಿಲ್ಲ. ಸವಾಲಾಗಿ ಸ್ವೀಕರಿಸಿ ಮತ್ತಷ್ಟು ಎತ್ತರಕ್ಕೆ ಬೆಳೆದಿದೆ. ಬಿಜೆಪಿ ಹೆಮ್ಮರ ಇದನ್ನು ಅಲುಗಾಡಿಸಲು ಸಾಧ್ಯವಿಲ್ಲ. ಪಕ್ಷ ಬಿಟ್ಟು ಹೋದವರು ಅಸ್ತಿತ್ವ ಕಳೆದುಕೊಂಡು ಕಾಣೆಯಾಗಿದ್ದಾರೆ ಎಂದು ಸಿಟಿ ರವಿ ಹೇಳಿದರು.
ಯಡಿಯೂರಪ್ಪ ಬಗ್ಗೆ ಅಪಾರವಾದ ಪ್ರೀತಿ,ಅಭಿಮಾನವಿದೆ. ಆದರೆ ಅವರೆಡೆಗೆ ನಮ್ಮ ನಿಷ್ಠೆ ಈಗಿಲ್ಲ. ನಮ್ಮ ನಿಷ್ಠೆಯೇನಿದ್ದರೂ ಬೆಜೆಪಿಗಷ್ಟೇ. ಯಾವುದೇ ವ್ಯಕ್ತಿಗಲ್ಲ ಎಂದು ವಾಗ್ದಾಳಿ ನಡೆಸಿರುವ ರವಿ, ಯಡಿಯೂರಪ್ಪ ಅವರಿಗೆ ಬಿಜೆಪಿ ಸರಕಾರವನ್ನು ಉರುಳಿಸುವಷ್ಟು ಸಾಮರ್ಥ್ಯವಿಲ್ಲ ಎಂದಿದ್ದಾರೆ.
ನನಗೂ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬ ಕನಸು ಇದೆ. ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಮಾಡಿರುವಂತೆ ಕಲ್ಯಾಣ ರಾಜ್ಯವನ್ನು ಮಾಡಬೇಕು ಎಂಬ ಕನಸು ಇದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ. ಕಡೂರು ತಾಲೂಕು ದೇವರಕಾರೇಹಳ್ಳಿ ಗ್ರಾಮದಲ್ಲಿ ವಿಕಾಸಯಾತ್ರೆ ಸಂದರ್ಭದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದಕ್ಕೂ ಮುನ್ನ ಕೆಜೆಪಿ ಮುಖಂಡ ಧನಂಜಯ್ ಕುಮಾರ್ ಅವರು ಸಿಟಿ ರವಿ ಅವರು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದರು.












Click it and Unblock the Notifications