ಕೆಜೆಪಿ ಅಧ್ಯಕ್ಷರಾಗಿ ಯಡಿಯೂರಪ್ಪ ಅಧಿಕಾರ ಸ್ವೀಕಾರ
ಹಾವೇರಿ, ಡಿ.9: ಬ್ಯಾಡಗಿ ಮೆಣಸಿನಕಾಯಿ ನಾಡಿನಲ್ಲಿ ಉರಿ ಬಿಸಿಲಿನಲ್ಲಿ ಹೊಸ ಪ್ರಾದೇಶಿಕ ಪಕ್ಷ ಕರ್ನಾಟಕ ಜನತಾ ಪಕ್ಷ ಭಾನುವಾರ (ಡಿ.9) ಉದಯವಾಗಿದೆ. ನೂತನ ಪಕ್ಷದ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಹಂಗಾಮಿ ಅಧ್ಯಕ್ಷರಾಗಿದ್ದ ಧನಂಜಯ್ ಕುಮಾರ್ ಅವರು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿ ಮುಂದಿನ ಮುಖ್ಯಮಂತ್ರಿಯಾಗುವಂತೆ ಶುಭ ಹಾರೈಸಿದರು.

ಹಾವೇರಿಯ ಜಿಎಚ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 100ಕ್ಕೂ ಅಧಿಕ ರಾಜಕೀಯ ಮುಖಂಡರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಕೆಜೆಪಿ ಬಾವುಟ ಸ್ವೀಕರಿಸುವ ಮೂಲಕ ಪಕ್ಷಕ್ಕೆ ಚಾಲನೆ ನೀಡಿದರು.
ವೇದಿಕೆ ಏರದ ಸಚಿವರು: ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಲೋಕೋಪಯೋಗಿ ಸಚಿವ ಸಿಎಂ ಉದಾಸಿ, ಕೈಗಾರಿಕಾ ಸಚಿವ ಮುರುಗೇಶ್ ರಾಣಿ, ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರೊಂದಿಗೆ ಉಪಹಾರ ಸೇವಿಸಿದರೂ ಕೆಜೆಪಿ ಸಮಾವೇಶಕ್ಕೆ ಆಗಮಿಸಿ ವೇದಿಕೆ ಏರಿಲ್ಲ.
ಸಚಿವ ಸೋಮಣ್ಣ, ಉಮೇಶ್ ಕತ್ತಿ, ಲಕ್ಷ್ಮಣ್ ಸವದಿ, ಪರಣ್ಣ ಮುನವಳ್ಳಿ, ವೀರಣ್ಣ ಚರಂತಿಮಠ, ಎಸ್ ವಿ ರಾಮಚಂದ್ರ, ಜಗದೀಶ್ ಮೆಟ್ಟಿಗೌಡ, ಶ್ರೀನಾಥ್ ಕುಲಕರ್ಣಿ, ಬಸವರಾಜ್ ಪಾಟೀಲ್, ವಾಲ್ಮೀಕಿ ನಾಯಕ, ವಿಠಲ್ ಕೆ, ಸುರೇಶ್ ಎಂ, ಸಿದ್ದು ಸವದಿ ಮುಂತಾದವರು ಟೀ ಪಾರ್ಟಿಗೂ ಗೈರು ಹಾಜರಾಗಿ ಕೈ ಕೊಟ್ಟರು.[ಮಿಕ್ಕಂತೆ ಯಾರು ಯಾರು ಹಾಜರಿದ್ದಾರೆ ನೋಡಿ]
ವೇದಿಕೆಯಲ್ಲಿ ನಟಿಯರಾದ ಶ್ರುತಿ, ಮಾಲಾಶ್ರೀ, ಪೂಜಾಗಾಂಧಿ, ನಟ ದೊಡ್ಡಣ್ಣ ಕಾಣಿಸಿಕೊಂಡಿದ್ದರು. ಈ ಪೈಕಿ ಪೂಜಾ ಗಾಂಧಿ ಅವರಿಗೆ ಮಾತ್ರ ಮೈಕ್ ಹಿಡಿಯುವ ಯೋಗ ಸಿಕ್ಕಿತ್ತು. ಯಡಿಯೂರಪ್ಪ ಜೀ ಒಂದು ವ್ಯಕ್ತಿಯಲ್ಲ ಶಕ್ತಿಯಲ್ಲ ಎಂದ ಪೂಜಾ ಗಾಂಧಿ ಅವರು ಯಡಿಯೂರಪ್ಪ ಅವರ ಕಲ್ಯಾಣ ಕರ್ನಾಟಕದ ಕನಸು ನನಸು ಮಾಡಿ ಎಂದರು.
ಯುಪಿಯಿಂದ ಬಂದ ನಾನು ಕನ್ನಡತಿಯಾಗಿದ್ದೇನೆ ಕೆಜೆಪಿ ಸೇರಲು ಯಡಿಯೂರಪ್ಪ ಅವರ ಹೋರಾಟ ಮನೋಭಾವವೇ ಕಾರಣ. 40 ವರ್ಷ ಅನುಭವ ಇರುವ ಯಡಿಯೂರಪ್ಪ ಅವರನ್ನು ನಾವು ಬೆಂಬಲಿಸಬೇಕಿದೆ ಎಂದರು.
ಪ್ರಸನ್ನ ಕುಮಾರ್ ಹೇಳಿಕೆ: ವೇದಿಕೆಯಲ್ಲಿ ಕಾಣಿಸಿಕೊಂಡ 16 ಶಾಸಕರು ಕಾಣಿಸಿಕೊಂಡಿದ್ದಾರೆ. ಕೆಜೆಪಿ ಸಂಸ್ಥಾಪಕ ಪ್ರಸನ್ನ ಕುಮಾರ್ ಅವರು ಮಾತನಾಡಿ, ನಾನು 7 ಕೋಟಿ ಕನ್ನಡಿಗರ ರಕ್ತದ ಸಾಕ್ಷಿಯಾಗಿ ಕೆಜೆಪಿಯನ್ನು ಯಡಿಯೂರಪ್ಪ ಅವರನ್ನು ಹಸ್ತಾಂತರ ಮಾಡುತ್ತಿದ್ದೇನೆ.
ಕಳ್ಳರ ಜೈಲು ಸೇರಿದವರ ಪಕ್ಷ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಅವರು ಹೇಳಿರುವುದು ಖಂಡನಾರ್ಹ. ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಕೆಜೆಪಿ ಕಾರ್ಯಕರ್ತರು ಅವರ ಮನೆಗೆ ಘೇರಾವ್ ಮಾಡುತ್ತೇವೆ ಎಂದು ಪ್ರಸನ್ನ ಕುಮಾರ್ ಅವರು ಆಕ್ರೋಶಭರಿತರಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕೆಜೆಪಿ ಪಕ್ಷದ ವೆಬ್ ಸೈಟ್(kjpkarnataka.org ) ಹಾಗೂ ಟ್ವಿಟ್ಟರ್ ಖಾತೆ(@KJPKarnataka)ಗಳನ್ನು ಚಾಲನೆ ಮಾಡಲಾಗಿದೆ.
ಕರ್ನಾಟಕದ ಜನತೆಗೆ ಮುಖ್ಯಮಂತ್ರಿ ಗೊತ್ತಿದೆ ನನ್ನ ಜೊತೆ ಎಷ್ಟು ಜನ ಶಾಸಕರು ಇದ್ದಾರೆ ಎಂಬುದು ಗೊತ್ತಿದೆ. ವೇದಿಕೆ ಏರುವಂತೆ ನಾವು ಯಾವ ಶಾಸಕರು, ಸಚಿವರು, ಸಂಸದರಿಗೂ ಕರೆ ನೀಡಿಲ್ಲ. ನನ್ನ ಮೇಲಿನ ಅಭಿಮಾನದಿಂದ ಎಲ್ಲರೂ ಬಂದಿದ್ದಾರೆ ಹೊರತು ಯಾರ ಮೇಲೂ ಒತ್ತಡ ಹೇರಿಲ್ಲ ಎಂದು ಯಡಿಯೂರಪ್ಪ ಬೆಳಗ್ಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications