ಕೆಜೆಪಿ ಉದ್ಘಾಟನೆಗೆ 45 ಬಿಜೆಪಿ ಶಾಸಕರು ಬಂದರೇ?

ಶಿವರಾಜ್ ಸಜ್ಜನ್ ಅವರ ಮನೆ ಉಪಾಹಾರ ಕೂಟದಲ್ಲ್ಲಿ ಸುಮಾರು 45 ಶಾಸಕರು ಭಾಗವಹಿಸಿದ್ದರು ಎಂಬ ಸುದ್ದಿ ಇದೆ. ಉಪಹಾರ ಕೂಟದಲ್ಲಿ ಚಹಾ ಕುಡಿದವರೆಲ್ಲರೂ ಕರ್ನಾಟಕ ಜನತಾ ಪಕ್ಷ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ನೆಹರೂ ಓಲೇಕಾರ, ಸುರೇಶ್ ಗೌಡ, ಮಾಜಿ ಸಚಿವ ಹಾಲಪ್ಪ, ಚನ್ನಗಿರಿ ಶಾಸಕ ಮೂಡಾಳ್ ವಿರೂಪಕ್ಷಪ್ಪ, ಶಾಸಕ ವಿಶ್ವನಾಥ್, ಸಚಿವ ಸಿಎಂ ಉದಾಸಿ, ಸಚಿವ ರೇವೂ ನಾಯಕ ಬೆಳಮಗಿ, ಸಂಸದ ಬಿವೈ ರಾಘವೇಂದ್ರ ಸೇರಿದಂತೆ ಇನ್ನೂ ಅನೇಕ ಬಿಜೆಪಿ ನಾಯಕರು ಕೆಜೆಪಿ ವೇದಿಕೆ ಏರಲಿದ್ದಾರೆ ಎನ್ನಲಾಗಿದೆ..
ನಿನ್ನೆಯಷ್ಟೇ ರಾಜೀನಾಮೆ ಸಲ್ಲಿಸಿದ್ದ ಸುನಿಲ್ ವಲ್ಯಾಪುರೆ ಅವರು ಖಾಸಗಿ ಕಾರಿನಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ನಾನು ಯಡಿಯೂರಪ್ಪ ಅವರ ಶಿಷ್ಯ. ನಾನು ಸ್ವ ಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದೇನೆ. ಕೆಜೆಪಿ ಸಮಾವೇಶಕ್ಕೆ ಹೋಗುವುದು ಖಂಡಿತ ಎಂದು ವಲ್ಯಾಪುರೆ ಹೇಳಿದರು.
ಬಿಜೆಪಿ ಹೈ ಕಮಾಂಡ್ ಅವರು 11,12ನೇ ವಿಕೆಟ್ ಕಿತ್ತಿದ್ದಾರೆ. ತಾಕತ್ತಿದ್ದರೆ ಓಪನಿಂಗ್ ಬ್ಯಾಟ್ಸ್ ಮನ್ ಔಟ್ ಮಾಡಲಿ. ನಾನೇನು ಹಿಟ್ ವಿಕೆಟ್ ಆಗಲ್ಲ. ನನ್ನನ್ನು ಔಟ್ ಮಾಡಲಿ ನೋಡೋಣ ಎಂದು ಶಾಸಕ ಬಿಪಿ ಹರೀಶ್ ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ.
ದಲಿತ ಶಾಸಕರ ಮೇಲೆ ಬಿಜೆಪಿ ತೆಗೆದುಕೊಂಡಿರುವುದು ಶಿಸ್ತುಕ್ರಮವಲ್ಲ. ಇದು ಸೇಡಿನ ಕ್ರಮ. ಇದು ಶಿಸ್ತಿನ ಕ್ರಮ ಆಗಿದ್ದಾರೆ. ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ ಬಿಜೆಪಿ ಸಂಸದರ ಮೇಲೆ ಕ್ರಮ ಜರುಗಿಸಬೇಕಿತ್ತು.
ಸದಾನಂದ ಗೌಡರು, ಈಶ್ವರಪ್ಪ ಅವರು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಕಾದಿದೆ. ಪ್ರಾದೇಶಿಕ ಪಕ್ಷ ಹಾಗೂ ಯಡಿಯೂರಪ್ಪ ಅವರ ನಾಯಕತ್ವದ ಅವಶ್ಯಕತೆ ಇದೆ ಎಂದು ಶಾಸಕ ಬಿಪಿ ಹರೀಶ್ ಹೇಳಿದ್ದಾರೆ.
ಇದೆಲ್ಲ ಅನಂತ್ ಕುಮಾರ್ ಅವರ ಷಡ್ಯಂತ್ರ, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಉಳಿಯಬಾರದು ಎಂಬುದು ಅವರ ಉದ್ದೇಶ.
ಸದಾನಂದ ಗೌಡ, ಈಶ್ವರಪ್ಪ ಅವರು ಅನಂತ್ ತಾಳಕ್ಕೆ ಕುಣಿಯುತ್ತಿದ್ದಾರೆ. ನನಗೆ ಸಿಗದ ಮುಖ್ಯಮಂತ್ರಿ ಪಟ್ಟ ಯಾರಿಗೂ ಸಿಗಬಾರದು ಎಂಬುದು ಅನಂತ್ ದುರುದ್ದೇಶ ಎಂದು ಹರೀಶ್ ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಸಿಎಂ ಹೇಳಿಕೆ: ಬೆಳಗಾವಿ ಅಧಿವೇಶನ ಮುಂದುವರೆಯಲಿದೆ. ಬಿಜೆಪಿ ಸರ್ಕಾರಕ್ಕೆ ಬಹುಮತವಿದೆ. ಸರ್ಕಾರ ಬೀಳುವುದಿಲ್ಲ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸಚಿವ ಸುನಿಲ್ ವಲ್ಯಾಪುರೆ ಅವರು ಸಲ್ಲಿಸಿರುವ ರಾಜೀನಾಮೆ ಪತ್ರ ತಲುಪಿಲ್ಲ. ತಲುಪಿದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಹಾವೇರಿ ಸಮಾವೇಶದಲ್ಲಿ ಪಾಲ್ಗೊಂಡ ಶಾಸಕರು, ಸಚಿವರ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಶೆಟ್ಟರ್ ಹೇಳಿದರು.












Click it and Unblock the Notifications