ವಿಧಾನಸಭೆ ವಿಸರ್ಜನೆ ಮಾಡಲ್ಲ: ಜಗದೀಶ್ ಶೆಟ್ಟರ್

ಕೆಜೆಪಿ ಸಮಾವೇಶಕ್ಕೆ 40-45 ಶಾಸಕರು ಹೋಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಸಮಾವೇಶಕ್ಕೆ ಹೋಗಿದ್ದು 12-14 ಜನ ಶಾಸಕರರು ಮಾತ್ರ ಎಂದು ತಿಳಿದು ಬಂದಿದೆ. 225 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 118 ಸ್ಥಾನ ಹೊಂದಿದೆ. ಹೀಗಾಗಿ ಸರ್ಕಾರಕ್ಕೆ ಯಾವುದೇ ಭಯವಿಲ್ಲ ಎಂದು ಶೆಟ್ಟರ್ ಹೇಳಿದರು.
ಸಚಿವ ಸುನಿಲ್ ವಲ್ಯಾಪುರೆ ಅವರು ಸಲ್ಲಿಸಿರುವ ರಾಜೀನಾಮೆ ಪತ್ರ ತಲುಪಿಲ್ಲ. ತಲುಪಿದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಹಾವೇರಿ ಸಮಾವೇಶದಲ್ಲಿ ಪಾಲ್ಗೊಂಡ ಶಾಸಕರು, ಸಚಿವರ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಶೆಟ್ಟರ್ ಹೇಳಿದರು.
ಕೆಜೆಪಿ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಾತನಾಡುತ್ತಾ, ಸರ್ಕಾರ ನಡೆಸಲು ಸಾಧ್ಯವಿಲ್ಲದಿದ್ದರೆ ವಿಧಾನಸಭೆ ವಿಸರ್ಜಿಸಿ ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ವಿಧಾನಸಭೆ ವಿಸರ್ಜನೆ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ಆಡಳಿತ ಯಂತ್ರ ಸುಗುಮವಾಗಿ ಸಾಗಿದೆ. ಪಕ್ಷ ಬೇರೆ, ಸರ್ಕಾರ ಬೇರೆ. ಶಾಸಕರ ಮೇಲೆ ಕ್ರಮ ಜರುಗಿಸುವುದು ಪಕ್ಷದ ನಿರ್ಧಾರ, ಈ ಬಗ್ಗೆ ಹೈಕಮಾಂಡ್ ನೊಂದಿಗೆ ಮಾತನಾಡಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಶೆಟ್ಟರ್ ಹೇಳಿದರು.
ಸದಾನಂದ ಗೌಡ ಕಿಡಿ: ಹಿರಿಯ ರಾಜಕಾರಣಿಯೊಬ್ಬರು ಕರ್ನಾಟಕ ಜನತಾ ಪಕ್ಷ ಎಂಬ ಹೊಸ ಪ್ರಾದೇಶಿಕ ಪಕ್ಷ ಕಟ್ಟಿದ್ದಾರೆ ಅವರಿಗೆ ಒಳ್ಳೆಯದಾಗಲಿ.
ಕೆಜೆಪಿ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಶಾಸಕರು ಭಾಗವಹಿಸಿದ್ದಾರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಸಚಿವರು, ಶಾಸಕರು ಹಾಗೂ ಸಂಸದರ ಮೇಲೆ ಕ್ರಮ ಕೈಗೊಳ್ಳುವುದಾಗಿ ಮತ್ತೊಮ್ಮೆ ಸದಾನಂದ ಗೌಡರು ಗುಡುಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಮಾತನಾಡಿದ ಸದಾನಂದ ಗೌಡರು, ನಿನ್ನೆ ಇವತ್ತು ಕೆಜೆಪಿಗೆ ಹೋದವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ನೋಡಿದ್ದೀರಿ. ಕೆಜೆಪಿ ಸಮಾವೇಶದಲ್ಲಿ ಭಾಗವಹಿಸಿದವರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದರು.
ಹುಬ್ಬಳ್ಳಿಯಲ್ಲಿ ಸಂಸದ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ಕೆಜೆಪಿಗೆ ಯಾರು ಯಾರು ಹೋಗಿದ್ದಾರೆ ಎಂಬುದರ ಪಟ್ಟಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಹುಶಃ ಭಾನುವಾರ ರಾತ್ರಿ ಅಥವಾ ನಾಳೆ ಶಾಸಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕೆಜೆಪಿ ಸಮಾವೇಶದಲ್ಲಿ ಪಾಲ್ಗೊಂಡ ಬಿಜೆಪಿ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಕೆಜೆ ಬೋಪಯ್ಯ ಅವರಿಗೆ ಬಿಜೆಪಿ ನಾಯಕರು ಸೂಚಿಸಿದ್ದಾರೆ ಎನ್ನಲಾಗಿದೆ.
ಬೆಳಗಾವಿ ಸದನದಲ್ಲಿ ಕೆಜೆಪಿ vs ಬಿಜೆಪಿ ಕದನದ ಬಗ್ಗೆ ಚರ್ಚೆ ನಡೆಸುವುದಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೂಡಾ ಹೇಳಿದ್ದಾರೆ.












Click it and Unblock the Notifications