ಉರಿ ಮೆಣಸಿನಕಾಯಿ ಜಿಲ್ಲೆ ಹಾವೇರಿ ನೋಟ

ಸುಮಾರು 25 ರಿಂದ 35 ಡಿಗ್ರಿ ಬಿಸಿಲು ಜೊತೆ ಉರಿ ಮೆಣಸಿನಕಾಯಿ ಖಾರವನ್ನು ಅರೆದು ಬಿಜೆಪಿಗೆ ಘಾಟು ಹಬ್ಬಿಸಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಿದ್ಧರಾಗಿದ್ದಾರೆ.
ಡಿ.9 ರಂದು ಹಾವೇರಿಯಲ್ಲಿ ಕರ್ನಾಟಕ ಜನತಾ ಪಕ್ಷ ಉದ್ಘಾಟನೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಬಿಜೆಪಿ ತೊರೆದು ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸುವ ಉತ್ಸಾಹದಲ್ಲಿರುವ ಯಡಿಯೂರಪ್ಪ ಅವರು ಇಡೀ ವಿಶ್ವದ ಗಮನ ಹಾವೇರಿಯತ್ತ ತಿರುಗಿಸಿದ್ದಾರೆ.
ಐತಿಹಾಸಿಕವಾಗಿ ಹಾವೇರಿ ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರವಾಗಿದೆ. ಈಗ ಕೆಜೆಪಿ ಉದಯದೊಂದಿಗೆ ರಾಜಕೀಯ ಕೇಂದ್ರವಾಗಿ ಬೆಳೆಯುವ ಸೂಚನೆಯೂ ಸಿಕ್ಕಿದೆ. ತಾವು ಸಿಎಂ ಆಗಿದ್ದ ಕಾಲದಲ್ಲಿ ಸೃಷ್ಟಿಸಿದ ಯಾದಗಿರಿ ಜಿಲ್ಲೆ ಬಿಟ್ಟು ಹಾವೇರಿಯತ್ತ ಯಡಿಯೂರಪ್ಪ ಅವರ ನೋಟ ನೆಟ್ಟಿದ್ದಾದರೂ ಯಾಕೆ?
ಬಹುಶಃ ಹಾವೇರಿಯಲ್ಲಿ ನಡೆದ ಗೋಲಿಬಾರ್ ನಲ್ಲಿ ರೈತನ ಸಾವಿನ ನಂತರವೂ ಅಧಿಕಾರ ನಡೆಸಿದ್ದಕ್ಕೆ ಪ್ರಾಯಶ್ಚಿತಕ್ಕಾಗಿ ಯಡಿಯೂರಪ್ಪ ಅವರು ಹಾವೇರಿಯನ್ನು ಆಯ್ಕೆ ಮಾಡಿರಬಹುದು. ಆದರೂ, ಸರಿಯುತ್ತರ ನಮ್ಮಲ್ಲಿಲ್ಲ.
ಹಾವೇರಿಯತ್ತ ರಾಜಕೀಯ ನಾಯಕರು ಸಾರೋಟು ಸಾಗುವ ಮುನ್ನ ಜಿಲ್ಲೆಯ ವೈಶಿಷ್ಟ್ಯದ ಬಗ್ಗೆ ಸ್ಥೂಲ ಪರಿಚಯ ಇಲ್ಲಿದೆ.
ಧಾರವಾಡವನ್ನು 1997ರಲ್ಲಿ ವಿಭಜಿಸಿ ಹಾವೇರಿ ಜಿಲ್ಲೆಯನ್ನು ರಚಿಸಲಾಯಿತು. ಹಾವೇರಿ ಜಿಲ್ಲೆಯು ಏಳು ತಾಲೂಕುಗಳನ್ನು ಹೊಂದಿದೆ. ವರದಾ ನದಿ ಹಾಗೂ ತುಂಗಭದ್ರ ನದಿಯನ್ನು ಹೊಂದಿರುವ ಹಾವೇರಿ ಜಿಲ್ಲೆ ಪ್ರಮುಖವಾಗಿ ಕೃಷಿ ಪ್ರಧಾನ ಜಿಲ್ಲೆ.
ಹಾವೇರಿ, ರಾಣೇಬೆನ್ನೂರು, ಹಿರೇಕೆರೂರು, ಶಿಗ್ಗಾಂವ, ಬ್ಯಾಡಗಿ, ಹಾನಗಲ್ ಮತ್ತು ಸವಣೂರು ತಾಲೂಕುಗಳು ಒಂದೊಂದು ಕಾರಣಕ್ಕೆ ಜನರಿಗೆ ನೆನಪಾಗುತ್ತದೆ.
ವಾರ್ಷಿಕವಾಗಿ ಸರಾಸರಿ 752.88 ಮಿ.ಮೀ. ಮಳೆ ಕಾಣುವ ಜಿಲ್ಲೆಯ ಪ್ರಮುಖ ಬೆಳೆಗಳೆಂದರೆ - ಜೋಳ, ಹತ್ತಿ, ಮೆಣಸಿನಕಾಯಿ, ಭತ್ತ, ಕಬ್ಬು, ಗೋವಿನಜೋಳ, ಎಣ್ಣೆ ಬೀಜಗಳು ಹಾಗೂ ದ್ವಿದಳ ಧಾನ್ಯಗಳು.
* ಕೆಂಪು ಮೆಣಸಿನ ಕಾಯಿಗೆ ಪ್ರಸಿದ್ಧವಾದ ಬ್ಯಾಡಗಿ,
* ಗಾನ ವಿಶಾರದೆ ಗಂಗೂಬಾಯಿ ಅವರ ಹಾನಗಲ್ಲು,
* ಶಿಶುನಾಳ ಷರೀಫರ ಜನ್ಮಭೂಮಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುನಾಳ ಗ್ರಾಮ(ಈ ಮುಂಚೆ ಧಾರವಾಡ ಜಿಲ್ಲೆಯಲ್ಲಿತ್ತು)
* 'ರಾಷ್ಟ್ರಕೂಟ', 'ಕಲ್ಯಾಣದ ಚಾಲುಕ್ಯ' ಹಾಗೂ 'ವಿಜಯನಗರದ ಅರಸರ ಶಾಸನಗಳನ್ನು ಹೊಂದಿರುವ ಬನವಾಸಿ ಭಾಗವಾಗಿದ್ದ ಹಿರೇಕೆರೂರು,
* ಸರ್ವಜ್ಞನ ಜನ್ಮಸ್ಥಳ ಎಂದು ನಂಬಲಾದ ಅಬಲೂರು ಕೂಡಾ ಹಿರೇಕೆರೂರು ಸಮೀಪದಲ್ಲೇ ಇದೆ.
* ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಪ್ರಮುಖ ವ್ಯಾಪಾರ ಕೇಂದ್ರವಾದ ರಾಣೇಬೆನ್ನೂರು, ಇತ್ತೀಚೆಗೆ ಕೃಷ್ಣಮೃಗ ಅಭಯಾರಣ್ಯಕ್ಕೂ ಪ್ರಸಿದ್ಧಿಯಾಗಿದೆ.
* ಅತ್ಯದ್ಭುತ ತ್ರಿವಳಿ ಮರಗಳನ್ನು ಹೊಂದಿರುವ, ಮಾಧ್ವರ ಶ್ರೀ ಕ್ಷೇತ್ರ ಸವಣೂರು ಖಾರಕ್ಕೂ, ತಾಂಬೂಲಕ್ಕೂ ಪ್ರಸಿದ್ಧ
* ಹಿರೇಕೆರೂರ ತಾಲ್ಲೂಕಿನಲ್ಲಿರುವ ಐತಿಹಾಸಿಕ ಮಾಸೂರು ಮದಗದ ಮಾಸೂರು ಕೆರೆಯೇ 'ಕೆರೆಗೆ ಹಾರ' ಜಾನಪದ ಕತೆಗೆ ಸ್ಪೂರ್ತಿ.
ಏಲಕ್ಕಿ ಹಾರ: ರಾಜ್ಯ ಪ್ರಶಸ್ತಿಯನ್ನು ಪಡೆದಿರುವ ಪಟವೆಗಾರ ಮನೆತನದವರು ಯಾಲಕ್ಕಿಯನ್ನು ಸರ ಮಾಡಿ ಮಾರಾಟ ಮಾಡುವ ಶ್ರಮಿಕ ವರ್ಗದವರು. ಒಂದರಿಂದ ಎಳೆಯಿಂದ ಇಪ್ಪತ್ತು ಎಳೆಯವರೆಗೂ ಯಾಲಕ್ಕಿ ಮಾಲೆಯನ್ನು ತಯಾರಿಸುತ್ತಾರೆ. ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿವೆ.
ಗಣ್ಯ ವ್ಯಕ್ತಿಗಳು: ಸರ್ವಜ್ಞ, ಕನಕದಾಸರು, ಕವಿ ಸುರಂ ಎಕ್ಕುಂಡಿ, ಪ್ರಪ್ರಥಮ ಕಾದಂಬರಿಕಾರರಾದ ಗಳಗನಾಥ, ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕ, ಸಂಗೂರಿನ ಯರೆಶೀಮಿ ಕರಿಯಪ್ಪ, ಸ್ವಾತಂತ್ರ್ಯ ಹೋರಾಟಗಾರ ಮೋಟೆಬೆನ್ನೂರಿನ ಮೈಲಾರ ಮಹದೇವಪ್ಪ, ಸಿದ್ದಪ್ಪ ಹೊಸಮನಿ ಕರಜಗಿ, ಹೊಸರಿತ್ತಿಯ ಗುದ್ಲೆಪ್ಪಾ ಹಳ್ಳಿಕೇರಿ, ರಮಾನಂದ ಮನ್ನಗಿ,
ಹಾವೇರಿ ಜಿಲ್ಲೆ ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಕೂಡಾ ಬೆಳೆದಿದೆ. ಐತಿಹಾಸಿಕ, ಪುರಾಣ ಪ್ರಸಿದ್ಧ ದೇಗುಲಗಳನ್ನು ಹೊಂದಿದೆ. ಪ್ರಮುಖ ದೇಗುಲಗಳು ಇಲ್ಲಿದೆ:
* ಪುರಸಿದ್ಧೇಶ್ವರ ದೇವಸ್ಥಾನ, ಹಾವೇರಿ (ಪುರಾತನ ಕಲ್ಲಿನ ಶಿಲ್ಪಕಲೆ)
* ಹುಕ್ಕೇರಿ ಮಠ, ಹಾವೇರಿ
* ಅಬಲೂರು, ಸರ್ವಜ್ಞನ ಜನ್ಮಸ್ಥಳ
* ಸಾತೇನಹಳ್ಳಿ ಶಾಂತೇಶ (ಹನುಮಂತ ದೇವರು) ದೇವಸ್ಥಾನ
* ಕಾಗಿನೆಲೆ , ಕನಕದಾಸರ ಜನ್ಮಸ್ಥಳ
* ಹಾವನೂರಿನ ದ್ಯಾಮವ್ವನ ದೇವಸ್ಥಾನ (ಹಾವೇರಿ ತಾಲುಕು).
* ಕದರಮಂಡಲಗಿಯ ಕಾಂತೇಶ(ಹನುಮಂತ ದೇವರು) ದೇವಸ್ಥಾನ
* ದೇವರಗುಡ್ಡ (ಮಾಲತೇಶ ಸ್ವಾಮಿ ದೇವಸ್ಥಾನ)
*ಗಂಗೀಭಾವಿ (ಜಾನ್ಹವಿ ಋಷಿಗಳು ಸ್ಥಾಪಿಸಿದ ರಾಮಲಿಂಗೇಶ್ವರ ದೇವಸ್ಥಾನ ಶಿಗ್ಗಾಂವದ ಹತ್ತಿರ)
* ಭೈರನಪಾದ (ಭೈರವೇಶ್ವರ ದೇವಸ್ಥಾನ)
* ಶ್ರೀಕ್ಷೇತ್ರ ಗುಡ್ಡದಮಲ್ಲಾಪೂರ,ಶ್ರೀ ಮುಕಪ್ಪ ಮಹಾಸ್ವಾಮಿಗಳ ಹಾಗೂ ಕತೃ,ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ.












Click it and Unblock the Notifications