ನೋಕಿಯಾ ಪ್ರಧಾನ ಕಚೇರಿ ಮಾರಾಟಕ್ಕಿದೆ, ಬೇಕಾ?
ಹೆಲ್ಸಿಂಕಿ, ಡಿ.4: ಇತ್ತಿತ್ಲಾಗೆ ಬಿಡಿ, ಕಾಸಿಗೊಂದು ಕೊಸರಿಗೆರಡು ಮೊಬೈಲುಗಳು ಸಿಗುತ್ತವೆ. ಆದರೆ ಅದೊಂದು ಕಾಲವಿತ್ತು, ಅದೇನೂ ಪುರಾತನ ಯುಗವಲ್ಲ. ಮೊನ್ನೆಮೊನ್ನೆಯಷ್ಟೇ ಅಂದರೆ ದಶಕದ ಹಿಂದೆ ಮೊಬೈಲ್ ಎಂಬ ಮಾಣಿಕ್ಯ ಮನುಷ್ಯನ ಕೈಗೆ ಬಂದಾಗ ಜನ ಅಪ್ಪಿಮುದ್ದಾಡಿದ್ದು ನೋಕಿಯಾ ಎಂಬ ಮುಬೈಲುಗಳನ್ನು.
ನಿಜಕ್ಕೂ ಅದು ಅದ್ಭುತವಾಗಿದ್ದ ಹ್ಯಾಂಡ್ ಸೆಟ್ಟೇ. ಆದರೆ ಕಾಲಾಯತಸ್ಮೈನಮಃ. ಇಂದಿನ ತಂತ್ರಜ್ಞಾನದಲ್ಲಿ ನಾಳೆಗೆ ಇಂದಿನ ಮೊಬೈಲ್ ಹಳತಾಗಿರುತ್ತದೆ. ಆದರೂ ನೋಕಿಯಾ ಮೊಬೈಲ್ ನಿಜಕ್ಕೂ ಅದ್ಭುತಾನೇ ಕಣ್ರಿ.
ಆದರೆ ಇಲ್ಲಿ ಹೇಳಹೊರಟಿರುವುದು ನೋಕಿಯಾ ಮೊಬೈಲುಗಳ ಬಗ್ಗೆ ಖಂಡಿತಾ ಅಲ್ಲ. ಆದರೆ ಅದನ್ನು ಉತ್ಪಾದಿಸುವ ಕಂಪನಿಯ ಬಗ್ಗೆಯಷ್ಟೇ. ಫಿನ್ ಲ್ಯಾಂಡಿನಲ್ಲಿ ಈ ಕಂಪನಿಯ ಭವ್ಯವಾದ ಪ್ರಧಾನ ಕಚೇರಿಯೊಂದಿದೆ. ಅದ್ಯಾರ ಕಣ್ಣುಬಿತ್ತು ಇದರ ಮೇಲೆ, ನೋಕಿಯಾ ಈಗ ಆ ಭವ್ಯವಾದ ಕಚೇರಿಯನ್ನೇ ಮಾರಾಟಕ್ಕಿಟ್ಟಿದೆ. (ಕೆಳಗಿನ ಚಿತ್ರದಲ್ಲಿದೆ ನೋಡಿ)

ಹೌದು, ಖರ್ಚುವೆಚ್ಚಗಳನ್ನು ತಗ್ಗಿಸಲು, ಭವಿಷ್ಯದಲ್ಲಿ ಪೈಪೋಟಿ ಎದುರಿಸಲು ಈ ಕ್ರಮ ಅನಿವಾರ್ಯ ಎಂಬ ತೀರ್ಮಾನಕ್ಕೆ ಕಂಪನಿ ಅದಾಗಲೇ ಬಂದಾಗಿದೆ.
ಫಿನ್ ಲ್ಯಾಂಡಿನ ರಾಜಧಾನಿ ಹೆಲ್ಸಿಂಕಿ ಸಮೀಪ ಎಸ್‌ಪೋದಲ್ಲಿ ಈ ಪ್ರಧಾನ ಕಚೇರಿಯನ್ನು ಮೊಬೈಲ್ ಉತ್ಪಾದಕ ಕಂಪನಿ ನೋಕಿಯಾ 1997ರಲ್ಲಿ ಸ್ಥಾಪಿಸಿತ್ತು. ಅದನ್ನೀಗ 222 ಶತಕೋಟಿ ಡಾಲರ್‌ಗೆ ಮಾರಾಟಕ್ಕಿಟ್ಟಿದೆ.
ನೋಕಿಯಾ ತನ್ನ ಹಣಕಾಸು ಪರಿಸ್ಥಿತಿಯನ್ನು ಉದ್ಯೋಗ ಕಡಿತ ಮತ್ತು ಇತರ ಕ್ರಮಗಳ ಮೂಲಕ ಸುಧಾರಿಸಲು ಯತ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಆಸ್ತಿಗಳನ್ನು ಮಾರುವ ಆಲೋಚನೆಯಲ್ಲೂ ಇದೆ. ಪಕ್ಕದ ಚೆನ್ನೈನಲ್ಲೂ ನೋಕಿಯಾದ ವಿಶಾಲ ಉತ್ಪಾದನಾ ಕಚೇರಿಯಿದೆ.
ಇತ್ತೀಚೆಗೆ ಕಂಪನಿಯು 10,000 ಉದ್ಯೋಗಿಗಳನ್ನು ಮನೆಗೆ ಕಳಿಸಿದೆ. ಹಾಗಂತ ಕಂಪನಿ ದಿವಾಳಿ ಎದ್ದಿದೆ ಅಂತಲ್ಲ. ಇಂದಿನ ಸ್ಪರ್ಧಾಯುಗದಲ್ಲಿ ನೋಕಿಯಾ ಮೊಬೈಲ್ ಸೆಟ್ ಗಳ ಮಾರಾಟವಂತೂ ತಳಕಚ್ಚಿದೆ. ಆದರೂ ಮುಂದಿನ ದಿನಗಳಲ್ಲಿ ಸದೃಢವಾಗಿ ಮಾರುಕಟ್ಟೆಯಲ್ಲಿ ನಿಲ್ಲುವಂತಾಗಲು ಇಂತಹ ಕ್ರರಮಗಳು ಅನಿವಾರ್ಯ ಎಂದು ಕಂಪನಿ ಹೇಳಿಕೊಂಡಿದೆ.












Click it and Unblock the Notifications