ನಿವೃತ್ತರಿಗೆ, ವಲಸಿಗರಿಗೆ ಟಿಕೆಟ್, ಕೈ ನಲ್ಲಿ ಭಿನ್ನಮತ

ವಲಸೆ ಹಕ್ಕಿಗಳಿಗೆ ಹಾಗೂ ನಿವೃತ್ತ ಅಧಿಕಾರಿಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎನ್ನುವ ಪ್ರಬಲ ಕೂಗು ಕಾಂಗ್ರೆಸ್‌ನಲ್ಲಿ ಕೇಳಿ ಬಂದಿದೆ.
ಕಾಂಗ್ರೆಸ್ ಸೇರಲು ತುದಿಗಾಲಲ್ಲಿರುವ ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್, ವಸತಿ ಸಚಿವ ವಿ. ಸೋಮಣ್ಣ, ಬಂದರು ಸಚಿವ ಆನಂದ್ ಆಸ್ನೋಟಿಕರ್, ಕೆ.ಎಸ್.ಆರ್.ಟಿ.ಸಿ. ಉಪಾಧ್ಯಕ್ಷ ಜಗ್ಗೇಶ್, ಬಿ.ಎನ್. ಬಚ್ಚೇಗೌಡ ಸೇರಿದಂತೆ ಇತರ ಮುಖಂಡರ ಕಾಂಗ್ರೆಸ್ ಸೇರ್ಪಡೆ ಹಾದಿ ಕಠಿಣವಾಗಿದೆ. ಇದರ ಜೊತೆಗೆ ನಿವೃತ್ತ ಅಧಿಕಾರಿಗಳ ಟಿಕೆಟ್ ಆಸೆ ಭಗ್ನಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಟಿಕೆಟ್ ಹಂಚಿಕೆ ಅವ್ಯವಹಾರ ತಪ್ಪಿಸಲು ನಿಷ್ಠಾವಂತ ಹಾಗೂ ಮಾಜಿ ಯುವ ಕಾಂಗ್ರೆಸ್ ಮುಖಂಡರ ಒಕ್ಕೂಟವೊಂದು ಅಸ್ತಿತ್ವಕ್ಕೆ ಬಂದಿದೆ.
ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎನ್ನುವುದೂ ಸೇರಿದಂತೆ ಒಂದಷ್ಟು ಅಂಶಗಳನ್ನು ಇಟ್ಟುಕೊಂಡು ನಿರ್ಣಯವನ್ನು ಈ ಒಕ್ಕೂಟ ಅಂಗೀಕರಿಸಿದೆ.
ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಗಾಳಿಗೆ ತೂರಿ ಕೇಸರಿ ಪಕ್ಷ ಸೇರಿದವರಿಗೆ ಪಕ್ಷದ ಬಾಗಿಲು ಬಂದ್ ಮಾಡಬೇಕು. ಇದಲ್ಲದೇ ಎರಡು ಬಾರಿ ಚುನಾವಣೆಯಲ್ಲಿ ಪರಾಭವಗೊಂಡವರಿಗೂ ಸಹ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದೆ.
ರಾಹುಲ್ ಗಾಂಧಿ ಹೇಳಿಕೊಟ್ಟ ಪಾಠ : ಇದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿಕೊಟ್ಟ ಪಾಠ ಅದರಂತೆ ನಾವು ನಡೆಯಬೇಕು ಎಂಬ ಎಚ್ಚರಿಕೆಯ ಮಾತುಗಳು ಕೇಳಿ ಬಂದಿದೆ.
ಈ ಒಕ್ಕೂಟಕ್ಕೆ ಮಾಜಿ ಯುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕ ಎಸ್.ಜಿ. ನಂಜಯ್ಯನ ಮಠ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪಕ್ಷ ತೊರೆದು ಬಿಜೆಪಿ ಸೇರಿದವರ ಉದ್ದೇಶ ಅಧಿಕಾರ ಅನುಭವಿಸುವುದೇ ಆಗಿತ್ತು. ಇಂಥವರನ್ನು ನಂಬುವಂತಿಲ್ಲ.
ಮತ್ತೆ ಇವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಪಕ್ಷದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಲಿದೆ ಎಂದು ನಂಜಯ್ಯನ ಮಠ್ ಹೇಳಿದ್ದಾರೆ.
ಪ್ರಮುಖವಾಗಿ ನಿವೃತ್ತ ಅಧಿಕಾರಿಗಳಿಗೆ ಪಕ್ಷದ ತತ್ವ ಸಿದ್ಧಾಂತದ ಬಗ್ಗೆ ಗೌರವ ಇರುವುದಿಲ್ಲ. ಇವರ ಉದ್ದೇಶವೂ ಸಹ ಅಧಿಕಾರ ಅನುಭವಿಸುವುದೇ ಆಗಿರುತ್ತದೆ.
ಅಧಿಕಾರಿಗಳು ಕನಿಷ್ಟ ಪಕ್ಷ ಐದು ವರ್ಷಗಳ ಕಾಲ ಪಕ್ಷದ ಸೇವೆ ಸಲ್ಲಿಸಿದ ನಂತರ ಬೇಕಿದ್ದರೆ ಸ್ಪರ್ಧಿಸಲು ಟಿಕೆಟ್ ನೀಡಲಿ ಎನ್ನುವುದು ಒಕ್ಕೂಟದ ನಿಲುವಾಗಿದೆ.
ಇದಲ್ಲದೇ ಪದೇ ಪದೇ ಕ್ಷೇತ್ರಗಳನ್ನು ಬದಲಿಸಿ ಗೆಲ್ಲಲು ವಿಫಲರಾಗುವ ಮುಖಂಡರಿಗೆ ಟಿಕೆಟ್ ನೀಡುವ ಅಗತ್ಯವಿಲ್ಲ. ಇಂತಹವರಿಗೆ ಟಿಕೆಟ್ ಕೊಟ್ಟರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಅವರು ಎಷ್ಟೇ ದೊಡ್ಡವರಾದರೂ ಸರಿ ಮಣೆ ಹಾಕಬಾರದು ಎಂದು ಈ ಒಕ್ಕೂಟ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ನಿರ್ಧರಿಸಿದೆ.
ಅಖಿಲ ಭಾರತ ಕಾಂಗ್ರೆಸ್ ಪಕ್ಷದ ನಿಯಮಗಳು ಸಹ ಸೋತವರಿಗೆ ಟಿಕೆಟ್ ನೀಡಬಾರದು ಎನ್ನುವ ನಿಯಮಗಳನ್ನು ಹಾಕಿಕೊಂಡಿದೆ. ಉತ್ತಮ ಅಭ್ಯರ್ಥಿಗಳಿಗೆ, ಜನಪರ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ಟಿಕೆಟ್ ಕೊಟ್ಟರೆ ಅದರಿಂದ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ.
ಹೊಸ ಮುಖಗಳಿಗೆ ಮತ್ತು ಯುವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವುದು ಎಐಸಿಸಿ ನಿಯಮಾವಳಿಗಳಾಗಿವೆ. ಇದನ್ನು ಕೆಪಿಸಿಸಿ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು ಎನ್ನುವುದು ಈ ಒಕ್ಕೂಟದ ಒತ್ತಾಯವಾಗಿದೆ.
ಕಾಂಗ್ರೆಸ್ ಒಕ್ಕೂಟದ ಮುಂದಿನ ಸಭೆ ಡಿಸೆಂಬರ್ 22 ರಂದು ಹುಬ್ಬಳ್ಳಿಯಲ್ಲಿ ನಡೆಯಲಿದ್ದು, ಈ ಸಭೆಗೆ ನಿಷ್ಠಾವಂತ ಮತ್ತು ನಿರ್ಲಕ್ಷಿತ ನಾಯಕರನ್ನು ಆಹ್ವಾನಿಸುತ್ತಿದ್ದು, ಪಕ್ಷವನ್ನು ಅಧಿಕಾರಕ್ಕೆ ತರಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಮಹತ್ವದ ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ.












Click it and Unblock the Notifications