24 ಗಂಟೆಗಳಲ್ಲಿ ಸರಕಾರ ಪತನ: ಯಡಿಯೂರಪ್ಪ

ಹೊಳಲ್ಕೆರೆಯಲ್ಲಿ ಸುದ್ದಿಗಾರರೊಂದಿಗೆ ಇಂದು ಮಂಗಳವಾರ ಮಾತನಾಡಿರುವ ಯಡಿಯೂರಪ್ಪ ಅವರು 'ಬಿಜೆಪಿ ಪಕ್ಷವು ತಮ್ಮ ಬೆಂಬಲಿಗ ಶಾಸಕರು/ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ ಶೆಟ್ಟರ್ ನಾಯಕತ್ವದ ಬಿಜೆಪಿ ಸರಕಾರವನ್ನು ಕೇವಲ 24 ಗಂಟೆಗಳಲ್ಲಿ ಬೀಳಿಸುವುದು ಖಚಿತ' ಎಂದು ಯಡಿಯೂರಪ್ಪ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಇದರಿಂದ ಶೆಟ್ಟರ್ ಸರಕಾರದ ಭವಿಷ್ಯದ ಮೇಲೆ ಕರಿಛಾಯೆ ಮೂಡಿದಂತಾಗಿದೆ.
ಡಿ. 9ರಂದು ಹಾವೇರಿಯಲ್ಲಿ ನಡೆಯಲಿರುವ ಕೆಜೆಪಿ ಸಮಾವೇಶಕ್ಕೂ ಮುನ್ನ ಯಡಿಯೂರಪ್ಪನವರ ಈ ಎಚ್ಚರಿಕೆಯ ಸಂದೇಶಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಹಾವೇರಿ ಸಮಾವೇಶದಲ್ಲಿ ಯಾರಾದರೂ ಪಾಲ್ಗೊಂಡರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ವರಿಷ್ಠರಿಂದ ರಾಜ್ಯ ಬಿಜೆಪಿ ನಾಯಕರು 'ಆದೇಶ' ಪಡೆದಿದ್ದಾರೆ ಎಂಬ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಕಟ್ಟೆಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಡಿ. 9ರ ನಂತರ ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಆಡಳಿತಾರೂಢ ಬಿಜೆಪಿಯಲ್ಲಿ ರಾಜಕೀಯ ವಿಪ್ಲವಗಳು ನಡೆಯುವುದು ಖಚಿತ ಎನ್ನಲಾಗಿದೆ.












Click it and Unblock the Notifications