ಅಪ್ಪ ಅಣ್ಣ ಮಾವನಿಂದ 2 ವರ್ಷ ಬಾಲಕಿಯ ಅತ್ಯಾಚಾರ!

ಮನಕಲಕುವ ಈ ಸಂಗತಿ ಬೆಳಕಿಗೆ ಬಂದಿದ್ದು ಎರಡು ದಿನಗಳ ಹಿಂದೆ. ಸತತ ಎರಡು ವರ್ಷಗಳ ಕಾಲ ತನ್ನನ್ನು ಸಾಕಿ ಸಲಹಬೇಕಾದ ತಂದೆ, ಅಣ್ಣ ಮತ್ತು ಸೋದರಮಾವನಿಂದ ಬಲಾತ್ಕಾರಕ್ಕೊಳಗಾದ 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ, ಶಾಲೆ ಮುಗಿದ ಮೇಲೆಯೂ ಮನೆಗೆ ಹೋಗುವುದಿಲ್ಲ ಎಂದು ಅಳುತ್ತ ಕುಳಿತಿದ್ದಾಗ ಈ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಯಾಕೆ ಅಳುತ್ತಿದ್ದೀ ಎಂದು ಶಿಕ್ಷಕಿಯೊಬ್ಬರು ಕೇಳಿದಾಗ ತನ್ನ ಮೇಲಾಗುತ್ತಿರುವ ಲೈಂಗಿಕ ದಬ್ಬಾಳಿಕೆಯ ಬಗ್ಗೆ ಆಕೆ ಹೇಳಿದ್ದಾಳೆ. ಕೂಡಲೆ ಶಾಲೆಯ ಅಧಿಕಾರಿಗಳು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಕೂಡಲೆ ದಾಳಿ ಮಾಡಿದ ಪೊಲೀಸರು ಬಾಲಕಿಯ ತಂದೆ, 15 ವರ್ಷದ ಅಣ್ಣ ಮತ್ತು ಸೋದರಮಾವನನ್ನು ಬಂಧಿಸಿದ್ದಾರೆ. ಬಾಲಕಿಯ ಅಣ್ಣ ಅಪ್ರಾಪ್ತ ವಯಸ್ಕನಾಗಿದ್ದರಿಂದ ಬಾಲಾಪರಾಧಿ ಮಂದಿರಕ್ಕೆ ಕಳುಹಿಸಲಾಗಿದೆ.
ಈ ಘಟನೆಯ ವಿಚಾರಣೆ ನಡೆಸಿದಾಗ ಮತ್ತೊಂದು ಆಘಾತಕಾರಿ ಸಂಗತಿ ಬಯಲಾಗಿದೆ. ಎರಡು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ಅಕ್ಕ ಕೂಡ ಈ ಮೂವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಸ್ವಂತ ತಂದೆ, ಅಣ್ಣನಿಂದ ನಡೆಯುತ್ತಿದ್ದ ಅತ್ಯಾಚಾರದಿಂದ ಬೇಸತ್ತ ಬಾಲಕಿಯ ಅಕ್ಕ ಆತ್ಮಹತ್ಯೆಗೆ ಶರಣಾಗಿದ್ದಳು. ಆಕೆ ಸತ್ತ ನಂತರ ತಮ್ಮ ಕಾಮುಕ ದೃಷ್ಟಿಯನ್ನು ಈ ಕಾಮುಕರು 13 ವರ್ಷದ ಬಾಲೆಯ ಮೇಲೆ ಹರಿಸಿದ್ದಾರೆ.
ಈ ಹೀನಾಯ ಕೃತ್ಯದ ವಿರುದ್ಧ ಸಿಡಿದೆದ್ದಿರುವ ಕೇರಳ ವನಿತಾ ಆಯೋಗದ ಅಧ್ಯಕ್ಷೆ ರೋಸಾಕುಟ್ಟಿ ಅವರು, ಇದು ಹೆಣ್ಣಿನ ಕುಲಕ್ಕೆ ಮಾಡಿದ ಅವಮಾನ, ಇದರ ಸಮಗ್ರ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಬಾಲಕಿಯ ಅಕ್ಕ ಆತ್ಮಹತ್ಯೆ ಮಾಡಿಕೊಂಡ ಘಟನೆಯ ತನಿಖೆ ನಡೆದಿಲ್ಲ ಎಂದು ಆರೋಪಿಸಿರುವ ಅವರು, ಬಾಲಕಿಯ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಿದ್ದಾರೆ.
ಸದ್ಯಕ್ಕೆ ಬಾಲಕಿ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಯಲ್ಲಿದ್ದು, ಆಕೆಗೆ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತಿದೆ. ಅನುಮತಿ ಕೊಟ್ಟರೆ ಕೇರಳ ವನಿತಾ ಆಯೋಗವೇ ಬಾಲಕಿಯ ರಕ್ಷಣೆಯ ಹೊಣೆಯನ್ನು ಹೊರುತ್ತದೆ ಎಂದು ರೋಸಾಕುಟ್ಟಿ ಆಶ್ವಾಸನೆ ನೀಡಿದ್ದಾರೆ.












Click it and Unblock the Notifications