ಮೂತ್ರ ವಿಸರ್ಜನೆಗೆ ಅಡ್ಡಿ: ಬಾಲಕಿಗೆ ಗುಂಡಿಕ್ಕಿ ಹತ್ಯೆ

ತಮ್ಮ ಮನೆಯ ಮುಂದೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಜಾವೇದ್ (26) ಎಂಬಾತನನ್ನು 17 ವರ್ಷದ ಬಾಲಕಿ ತಡೆದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಜಾವೇದ್ ಆ ಬಾಲಕಿಯನ್ನು ಬರ್ಬರವಾಗಿ ಸಾಯಿಸಿ, ಆಕೆಯ ತಾಯಿಯ ಮೇಲೂ ಹಲ್ಲೆ ಮಾಡಿದ್ದಾನೆ.
ದಕ್ಷಿಣ ದೆಹಲಿಯ ಹಜ್ರತ್ ನಿಜಾಮುದ್ದೀನ್ ಬ್ಲಾಕ್ ನಲ್ಲಿ ಬುಧವಾರ ರಾತ್ರಿ 10 ಗಂಟೆಯಲ್ಲಿ ಈ ಘಟನೆ ನಡೆದಿದೆ. ಸಾವಿಗೀಡಾದ ಬಿನ್ನೊ ಅಲಿಯಾಸ್ ಗುಡಿಯಾಳ ಮನೆಯ ಗೇಟಿನ ಮುಂದೆ ಮೂತ್ರ ವಿಸರ್ಜಿಸಲು ಜಾವೇದ್ ಮುಂದಾದಾಗ ಗುಡಿಯಾ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ.
ಇದರಿಂದ ಸಿಟ್ಟಿಗೆದ್ದ ಜಾವೇದ್ ಜೋರಾಗಿ ಕೂಗಾಡತೊಡಗಿದ. ಇದರಿಂದ ಮನೆಯಲ್ಲಿದ್ದ ಗುಡಿಯಾಳ ತಾಯಿ ಸದ್ಮಾನಿ (40) ಹೊರಬಂದರು. ಅವರೂ ಜಾವೇದನ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆ ವೇಳೆ ಜಾವೇದ್ ತನ್ನ ಕಿಸೆಯಲ್ಲಿದ್ದ ಪಿಸ್ತೂಲನ್ನು ಹೊರತೆಗೆದು, ಬಾಲಕಿಯ ಮೇಲೆ 2 ಸುತ್ತು ಗುಂಡು ಹಾರಿಸಿದ್ದಾನೆ. ಜತೆಗೆ ಆಕೆಯ ತಾಯಿಯ ಮೇಲೂ ಗುಂಡು ಹಾರಿಸಿದ್ದಾನೆ.
ಇದರಿಂದ ಗುಡಿಯಾ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ. ಆಕೆಯ ತಾಯಿಯನ್ನು AIIMS ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯ ಬಳಿಕ ಜಾವೇದ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಗುಡಿಯಾ ಜಂಗ್ ಪುರ ಸರಕಾರಿ ಶಾಲೆಯಲ್ಲಿ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಗುಡಿಯಾಳ 14 ವರ್ಷದ ತಮ್ಮ ಮತ್ತು ಆಕೆಯ ತಂದೆ ಘಟನೆಯ ವೇಳೆ ಮನೆಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications