ಬಿಜೆಪಿಗೆ ಭಾರೀ ಮುಜುಗರ:ಗಡ್ಕರಿ ತಲೆದಂಡಕ್ಕೆ ಸಿನ್ಹಾ ಪಟ್ಟು

ಸಂಸತ್ತಿನ ಚಳಿಗಾಲದ ಅಧಿವೇಶನ ನಾಳೆಯಿಂದ (ನ 22) ಆರಂಭವಾಗುತ್ತಿದೆ. ಎಫ್ ಡಿಐ ಮುಂತಾದ ಹಗರಣಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದ್ದ ಬಿಜೆಪಿಗೆ ಯಶವಂತ್ ಸಿನ್ಹಾ ಹೇಳಿಕೆಯಿಂದ ತೀವ್ರ ಮುಜುಗರ ಉಂಟಾಗಿದೆ.
ನಾನು ಅತ್ಯಂತ ದುಃಖ ಮತ್ತು ಬೇಸರದಿಂದ ಗಡ್ಕರಿ ರಾಜೀನಾಮೆ ಕೇಳುತ್ತಿದ್ದೇನೆ. ಪಕ್ಷದ ವೇದಿಕೆಯಲ್ಲಿ ಗಡ್ಕರಿ ರಾಜೀನಾಮೆ ಕೇಳಿದ್ದೆ. ಈಗ ಅದರ ಬಗ್ಗೆ ಸಾರ್ವಜನಿಕವಾಗಿ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇನೆ ಎಂದು ಸಿನ್ಹಾ ಹೇಳಿದ್ದಾರೆ.
ಈ ಹಿಂದೆ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಅನ್ಷುಮಾನ್ ಮಿಶ್ರಾವರನ್ನು ಪಕ್ಷ ಬೆಂಬಲಿಸಿದ್ದಾಗ ಅದರ ವಿರುದ್ದ ಧ್ವನಿಯೆತ್ತಿದ್ದೆ. ಆಗ ಪಕ್ಷ ನನ್ನ ಸಲಹೆಗೆ ಬೆಲೆ ನೀಡಿತ್ತು. ಈಗಲೂ ನನ್ನ ಮಾತಿಗೆ ಬೆಲೆ ಸಿಗುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದು ಸಿನ್ಹಾ ಹೇಳಿದ್ದಾರೆ.
ಕೆಲ ತಿಂಗಳಿಂದ ಪಕ್ಷದೊಳಗೆ ನಡೆದಿರುವ ಬೆಳವಣಿಗೆ ಕಂಡು ಅತೀವ ಬೇಸರವಾಗಿದೆ. ಪಕ್ಷದ ಪ್ರತಿಯೊಬ್ಬ ಮುಖಂಡರೂ ಆರೋಪಗಳಿಂದ ಹೊರತಾಗಿರಬೇಕು. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬಿಜೆಪಿ ವಿಶ್ವಾಸಾರ್ಹತೆಯನ್ನು ಯಾರೂ ಪ್ರಶ್ನೆ ಮಾಡುವಂತಿರಬಾರದು ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
ಈ ಮೊದಲು ಪಕ್ಷದ ಜತೆ ನನಗೆ ಭಿನ್ನಾಭಿಪ್ರಾಯವಿದ್ದದ್ದು ನಿಜ. ಏನೇ ಇರಲಿ ಭಿನ್ನಾಭಿಪ್ರಾಯಗಳ ಮಧ್ಯೆಯೇ ನಾನು ಬಿಜೆಪಿಯಲ್ಲಿಯೇ ಮುಂದುವರಿಯುತ್ತೇನೆ. ಬಿಜೆಪಿಯಲ್ಲಿನ ಸದ್ಯದ ವಿದ್ಯಮಾನಗಳು ನನ್ನಲ್ಲಿ ಹೆಚ್ಚಿನ ದುಃಖಕ್ಕೆ ಕಾರಣವಾಗಿವೆ ಎಂದೂ ಸಿನ್ಹಾ ಬೇಸರ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications