ಮಹಾರಾಜರ ಕುದುರೆಗಾಡಿಯ ಸರಕಾರ ಖರೀದಿಸುವುದೇ?

ಹೌದು. ಈ ಐತಿಹಾಸಿಕ, ವಿಶೇಷಾಕರ್ಷಣೆಯ ಸಾರೋಟು ವಾಹನವನ್ನು ಖರೀದಿಸುವ ಪ್ರಕ್ರಿಯೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ಎ ರಾಮದಾಸ್ ಅವರು ರಾಜ್ಯ ಸರಕಾರದ ವತಿಯಿಂದ ಚಾಲನೆ ನೀಡಿದ್ದಾರೆ. ಸಾರೋಟು ಮೈಸೂರಿಗೆ ಮರಳುತ್ತಿದ್ದಂತೆ ಅದನ್ನು ಅರಮನೆಯ ಆವರಣದಲ್ಲಿ ಸದಾ ಕಾಲ ಪ್ರದರ್ಶನಕ್ಕಿಡಲಾಗುವುದು ಎಂದು ಅರಮನೆಯ ಮೂಲಗಳು ತಿಳಿಸಿವೆ.
ಮೈಸೂರಿನ ಈ ಹೆಮ್ಮೆಯ ಕುದುರೆಗಾಡಿಯನ್ನು ಖರೀದಿಸಲು ಜಾಗತಿಕ ಮಟ್ಟದಲ್ಲಿ ಕೆಲವರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯ ಸರಕಾರ ತನ್ನ ಶಕ್ತಿಮೀರಿ ಇದನ್ನು ತನ್ನಲ್ಲೇ ಉಳಿಸಿಕೊಳ್ಳಲು ಪ್ರಯತ್ನಪಡುತ್ತಿದೆ. ಈ ಸಂಬಂಧ, 1 ಕೋಟಿ ರೂ. ಹಣವನ್ನೂ ತೆಗೆದಿರಿಸಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಕರ್ನಾಟಕದ ಸಂಸ್ಕೃತಿ ಮತ್ತು ಸಂಪ್ರದಾಯದ ಧ್ಯೋತಕವಾದ ಮಹಾರಾಜರ ಕುದುರೆಗಾಡಿಯ ಖರೀದಿ ಸಂಬಂಧ ಮೈಸೂರು ಅರಮನೆಯ ಅಧಿಕಾರಿಗಳನ್ನೊಳಗೊಂಡ ತಂಡವನ್ನು ಲಂಡನ್ನಿಗೆ ಕಳುಹಿಸಲು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರಿಗೆ ಸೂಚಿಸಿದ್ದಾರೆ.
'ಮಾಧ್ಯಮಗಳ ಮೂಲಕ ಕುದುರೆಗಾಡಿಯ ಹರಾಜು ವಿಷಯ ತಿಳಿದುಬಂದಿದೆ. ಅದರ ಐತಿಹಾಸಿಕ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ನಮ್ಮಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ಹಾಗಾಗಿ ಮುಖ್ಯಮಂತ್ರಿ ಶೆಟ್ಟರ್ ಅವರು ತಕ್ಷಣ ಉನ್ನತಾಧಿಕಾರಿಗಳ ತಂಡವನ್ನು ಲಂಡನ್ನಿಗೆ ಕಳಿಸಿದ್ದಾರೆ' ಎಂದು ಸಚಿವ ಎಸ್ಎ ರಾಮದಾಸ್ ಸ್ಪಷ್ಟಪಡಿಸಿದ್ದಾರೆ.
'ಈಗ ಅಂದಾಜಿಸಲಾಗಿರುವ ಮೊತ್ತಕ್ಕಿಂತ (ಅಂದಾಜು 1 ಕೋಟಿ ರೂ) ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗದು ಎಂಬ ಆಶಾಭಾವವಿದೆ. ಹಾಗಾಗಿ, ಈ ಮೈಸೂರು ಅರಮನೆಯ ನಿಧಿಯನ್ನು ಬಳಸಿಯೇ ಈ ಖರೀದಿ ಮಾಡಲಾಗುವುದು. ಅದಕ್ಕಾಗಿ ಸರಕಾರವೇನೂ ಪ್ರತ್ಯೇಕವಾಗಿ ಖರ್ಚು ಮಾಡದು' ಎಂದು ಸಚಿವ ರಾಮದಾಸ್ ಹೇಳಿದ್ದಾರೆ.
ಇಂಗ್ಲೆಂಡಿನ ವ್ಯಾಪಾರಿಯೊಬ್ಬರು 2 ವರ್ಷಗಳ ಹಿಂದೆ ಈ ಕುದುರೆಗಾಡಿ ಕೋಚ್ ಅನ್ನು ಖರೀದಿಸಿದ್ದರು. ಅದಕ್ಕೆ ಅಲ್ಪಸ್ವಲ್ಪ ರಿಪೇರಿ, ಬಣ್ಣ ಹಚ್ಚಿ ವ್ಯಾಪಾರಕ್ಕೆ ಇಟ್ಟಿದ್ದಾರೆ. ಅದೀಗ ಸುಮಾರು 1 ಕೋಟಿ ರೂ. ಗೆ ಮಾರಾಟವಾಗುವ ಅಂದಾಜಿದೆ. Historics at Brooklands ಎಂಬ ಹರಾಜು ಸಂಸ್ಥೆ ಭಾರತದ ಈ ಅಪೂರ್ವ ಕುದುರೆಗಾಡಿಯನ್ನು ಮಾರಾಟಕ್ಕೆ ನಿಲ್ಲಿಸಿದೆ.












Click it and Unblock the Notifications