ಈಶ್ವರಪ್ಪನ್ನ ಕೆಜೆಪಿ ಒಳಗೆ ಬಿಟ್ಕೊಳಲ್ಲ : ಧನಂಜಯ್

ಚುನಾವಣಾ ಪೂರ್ವದಲ್ಲಿ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲು ಕರ್ನಾಟಕ ಜನತಾಪಕ್ಷ ಕಾರ್ಯತಂತ್ರ ರೂಪಿಸಿದೆ. ಮುಂದಿನ ವಾರದಿಂದ ರಾಜ್ಯದ ಎಲ್ಲಾ ಕಡೆ ಸದಸ್ಯತ್ವ ಅಭಿಯಾನ ನಡೆಸಲಾಗುತ್ತದೆ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಧನಂಜಯ ಕುಮಾರ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರು ಬಿಜೆಪಿ ಪಕ್ಷದಲ್ಲಿ ಅಧ್ಯಕ್ಷ ಸ್ಥಾನವನ್ನಾಗಲೀ, ಮುಖ್ಯಮಂತ್ರಿ ಸ್ಥಾನವ ನ್ನಾಗಲೀ ಕೇಳಿರಲಿಲ್ಲ. ರಾಜ್ಯದ ಬಿಜೆಪಿ ಇಂತಹ ದುಸ್ಥಿತಿಗೆ ಕಾರಣರಾಗಿರುವ ರಾಜ್ಯಾಧ್ಯಕ್ಷ ಈಶ್ವರಪ್ಪ, ಸಂಸದ ಅನಂತ ಕುಮಾರ್, ಹಾಗೂ ಸಂತೋಷ್‌ರನ್ನು ಪಕ್ಷದಿಂದ ಹೊರಹಾಕಿ ಎಂದು ಸಲಹೆ ಕೊಟ್ಟಿದ್ದೆವು. ಆದರೆ ಅದಕ್ಕೆ ರಾಷ್ಟ್ರೀಯ ನಾಯಕರಾರು ಗಮನ ನೀಡಲಿಲ್ಲ. ಅದಕ್ಕೆ ಯಡಿ ಯೂರಪ್ಪರೇ ಪಕ್ಷ ದಿಂದ ಹೊರ ಬರುತ್ತಿದ್ದಾರೆ ಎಂದರು.
ಬೆಂಬಲ ಯುಪಿಎಗೋ? ಎನ್‌ಡಿಎಗೋ? : ರಾಷ್ಟ್ರಮಟ್ಟದಲ್ಲಿ ಕೆಜೆಪಿ ಪಕ್ಷ ಯುಪಿಎ ಬೆಂಬಲಿ ಸಲಿದೆಯೋ ಅಥವಾ ಎನ್‌ಡಿಎ ಬೆಂಬಲಿಸಲಿದೆಯೋ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಧನಂಜಯ ಕುಮಾರ್, ನಮ್ಮದು ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಪಕ್ಷವನ್ನು ದೊಡ್ಡಮಟ್ಟದಲ್ಲಿ ಸಂಘಟಿಸಿ ಅಧಿಕಾರಕ್ಕೆ ತರುವುದು ನಮ್ಮ ಮೊದಲ ಉದ್ದೇಶ ನಂತರ ರಾಷ್ಟ್ರಮಟ್ಟದಲ್ಲಿನ ಬೆಂಬಲದ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಕೆಜೆಪಿ ಪಕ್ಷ ಪ್ರಜಾಪ್ರಭುತ್ವ ರೀತಿಯಲ್ಲೇ ಅಸ್ಥಿತ್ವಕ್ಕೆ ಬಂದಿದೆ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಮುಂಬರುವ ಚುನಾ ವಣೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಲಾಗಿದೆ.
ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ರಾಜ್ಯಾದ್ಯಂತ ದೊಡ್ಡ ಯುವಕರ ಪಡೆ ಕೆಜೆಪಿಗೆ ಸೇರುತ್ತಿದೆ. ಬಿಜೆಪಿಯ ಶೇ.90 ರಷ್ಟು ಚುನಾಯಿತ ಪ್ರತಿನಿಧಿಗಳು ಕೆಜೆಪಿಗೆ ಬರಲು ಸಿದ್ಧರಾಗಿದ್ದಾರೆ. ಡಿ. 9ರಂದು ಹಾವೇರಿಯಲ್ಲಿ ನಡೆಯಲಿರುವ ಸಮಾವೇಶದ ನಂತರ ದೊಡ್ಡ ಬದಲಾವಣೆಯಾಗಲಿದೆ ಎಂದು ನುಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿಗೆ ಭವಿಷ್ಯವಿಲ್ಲ, ಜನತೆ ಹೊಸ ಪಕ್ಷವನ್ನು ನಿರೀಕ್ಷಿಸಿದ್ದಾರೆ. ಕರ್ನಾಟಕ ಜನತಾಪಕ್ಷ ಶಕ್ತಿಶಾಲಿಯಾಗಿ ಬೆಳೆಯಲಿದೆ. ಈ ಪಕ್ಷಕ್ಕೆ ಬಿ.ಎಸ್. ಯಡಿಯೂರಪ್ಪರನ್ನು ಆಹ್ವಾನಿಸಿದ್ದೇವೆ ಅವರು ಈ ಪಕ್ಷದಲ್ಲಿ ಪ್ರಶ್ನಾತೀತ ನಾಯಕರಾಗಿರುತ್ತಾರೆ ಎಂದು ಹೇಳಿದರು.












Click it and Unblock the Notifications