ಯಡಿಯೂರಪ್ಪ ವಿರೋಧಿಗಳಿಗೆ ಮುಂದೈತೆ ಮಾರಿ ಹಬ್ಬ

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾ, ಅಧಿಕಾರ, ಅಂತಸ್ತು ಎಲ್ಲ ಪಡೆದು ಈಗ ದಿನನಿತ್ಯ ಬಿಎಸ್ ವೈ ಅವರನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿರುವವರಿಗೆ ಕಾಲವೇ ಉತ್ತರ ಕೊಡಲಿದೆ ಎಂದು ಗುಡುಗಿದ್ದಾರೆ. ಯಡಿಯೂರಪ್ಪ ಅವರು, ಸರ್ವಜನಾಂಗದ ನಾಯಕರಾಗಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಎಲ್ಲ ಇಲಾಖೆಗಳಿಗೆ ಕಾಯಕಲ್ಪ ನೀಡಿದ್ದರು ಎಂದು ಹೇಳಿದರು.
ಹಾಗೆಯೇ, ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳದಿದ್ದರೆ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ದೊಡ್ಡ ಆಘಾತ ಕಾದಿದೆ ಎಂದು ಯಡಿಯೂರಪ್ಪ ಅವರ ಕಟ್ಟಾಳು ರೇಣುಕಾಚಾರ್ಯ ಘೋಷಿಸಿದ್ದಾರೆ. ಬಿಜೆಪಿಗೆ ಯಡಿಯೂರಪ್ಪ ದೊಡ್ಡಶಕ್ತಿ. ಅವರಿಲ್ಲದ ಬಿಜೆಪಿ ಶಕ್ತಿ ಕಳೆದುಕೊಂಡು ಬಿಡುತ್ತದೆ. ಅವರನ್ನು ಲಘುವಾಗಿ ಪರಿಗಣಿಸಿದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಸೂಕ್ಷ್ಮವಾಗಿ ಹೇಳಿದರು.
ಪಕ್ಷದ ನಿಷ್ಠಾವಂತ ಎಂದು ಹೇಳಿಕೊಳ್ಳುವ ಕೆಲವರು ತಾವು ಗೆಲ್ಲಲು ಎರಡೆರಡು ಬಾರಿ ಯಡಿಯೂರಪ್ಪ ಅವರನ್ನು ಸ್ವಕ್ಷೇತ್ರಕ್ಕೆ ಕರೆದೊಯ್ದು ಪ್ರಚಾರ ಮಾಡಿಸಿಕೊಂಡರು, ಮಂತ್ರಿಯಾಗಲು ಶಾಸಕರ ಸಹಿ ಸಂಗ್ರಹ ಮಾಡಿದರು.
ಈಗ ಯಡಿಯೂರಪ್ಪ ಅವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆಲ್ಲ ಕಾಲ ಮತ್ತು ಜನರೇ ಉತ್ತರ ಕೊಡುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಸಿಟಿ ರವಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
KMF ಅಧ್ಯಕ್ಷ ಗಾದಿಯಂತಹ ಸಣ್ಣ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಡಿವಿ ಸದಾನಂದ ಗೌಡರನ್ನು ಯಡಿಯೂರಪ್ಪ ಅವರು, ಮುಖ್ಯಮಂತ್ರಿ ಮಾಡಿದರು. 11 ತಿಂಗಳ ಮುಖ್ಯಮಂತ್ರಿ ಅಧಿಕಾರ ಅನುಭವಿಸಿದ ಮೇಲೆ ಅವರ ಬಗ್ಗೆಯೇ ಹಗುರವಾಗಿ ಮಾತನಾಡುತ್ತಿದ್ದಾರೆ.
ಮನುಷ್ಯನಿಗೆ ಇಷ್ಟೊಂದು ಕೆಟ್ಟ ಬುದ್ಧಿ ಬರಬಾರದು.ಇವತ್ತು ನಾನೇನಾದರೂ ಈ ಕುರ್ಚಿಯಲ್ಲಿ ಕುಳಿತಿದ್ದರೆ ಯಡಿಯೂರಪ್ಪ ಅವರ ಆರ್ಶೀವಾದವೇ ಕಾರಣ. ನನ್ನ ಕೊನೆ ಉಸಿರು ಇರುವವರೆಗೂ ಯಡಿಯೂರಪ್ಪ ಅವರೇ ನಮ್ಮ ನಾಯಕರು ಎಂದು ರೇಣುಕಾಚಾರ್ಯ ಹೇಳಿದರು.












Click it and Unblock the Notifications