ಮೋಹದ ಮಾತುಕತೆ: ಕಾಲ್ ಸೆಂಟರ್ ಗಳಿಕೆ ಕೋಟ್ಯಂತರ

ಕಾಲ್ ಸೆಂಟರ್ ಸೋಗಿನಲ್ಲಿ ಮೋಹದ ಬಲೆ ಹರಡಿ ಕೋಟ್ಯಂತರ ರೂ ಗಳಿಸುತ್ತಿದ್ದ ಖದೀಮರನ್ನು ನೋಯ್ಡಾದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತೊಂದು ಖ್ಯಾತ ಕಾಲ್ ಸೆಂಟರ್ ಸಹ ಭಾಗಿಯಾಗಿರಬಹುದು. ಅದರ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರ ಪೈಕಿ ಜನರಲ್ ಮ್ಯಾನೇಜರ್, ಒಬ್ಬ ಮಹಿಳಾ ಉದ್ಯೋಗಿ ಸೇರಿದಂತೆ ಒಟ್ಟು 4 ಮಂದಿ ಇದ್ದಾರೆ.
ಸದರಿ ಕಾಲ್ ಸೆಂಟರಿನ ಆರೋಪಿ ತಂಡವು ಸಂಜಯ್ ಗುಪ್ತಾ ಎಂಬ ಯುವಕನಿಗೆ ಎಸ್ಎಂಎಸ್ ಸಂದೇಶ ಕಳಿಸಿತ್ತು. ಎಸ್ಎಂಎಸ್ ನಲ್ಲಿ ಸೂಚಿಸಿದ್ದಂತೆ ಮೊಬೈಲ್ ಗೆ ಸಂಜಯ್ ಗುಪ್ತಾ ಕರೆ ಮಾಡಿದ್ದ. ಆಗ ಆತನನ್ನು ಲೈಂಗಿಕವಾಗಿ ದುರ್ಮಾರ್ಗಕ್ಕೆ ಪ್ರೇರೇಪಿಸಿದ ತಂಡದ ಯುವತಿ, ಮುಂದೆ ಅದನ್ನೇ ಕಾಯಕವಾಗಿಸಿಕೊಂಡಳು.
ದಿನಾ ಗಂಟೆಗಟ್ಟಲೆ ಸಂಜಯ್ ಗುಪ್ತಾ ಜತೆ ಮಾತನಾಡತೊಡಗಿದ ಯುವತಿ, ಗುಪ್ತವಾಗಿ ಆತನ ಸಾಂಗತ್ಯ ಬಯಸುವುದಾಗಿ ಉಲಿದಿದ್ದಳು. ಆದರೆ ಅದಕ್ಕೂ ಮುನ್ನ ತನ್ನ ಬ್ಯಾಂಕ್ ಖಾತೆಗೆ ಒಂದಷ್ಟು ಹಣ ವರ್ಗಾಯಿಸುವಂತೆ ಸೂಚಿಸಿದ್ದಳು. ಅನಾಯಾಸವಾಗಿ ಯುವತಿಯ ಸಾಂಗತ್ಯ ಸಿಗುತ್ತದಲ್ಲಾ ಎಂದು ನಂಬಿದ ಗುಪ್ತಾ, ಯುವತಿ ನೀಡಿದ್ದ ಬ್ಯಾಂಕ್ ಖಾತೆಗೆ ಸಾಕಷ್ಟು ಹಣನನ್ನು ವರ್ಗಾಯಿಸಿ, ಬರಿಗೈ ದಾಸನಾದ.
ಆಗಷ್ಟೇ ಗುಪ್ತಾಗೆ ಜ್ಞಾನೋದಯವಾಗಿದ್ದು, ಆಕೆ ಮೋಸಗಾತಿ ಎಂದೂ, ತಾನು ಸಂಪೂರ್ಣವಾಗಿ ಹಣ ಕಳೆದುಕೊಂಡಿದ್ದೇನೆ ಎಂದೂ. ತಕ್ಷಣ ವಾಸ್ತವಕ್ಕೆ ಮರಳಿದ ಗುಪ್ತಾ, ಪೊಲೀಸರಿಗೆ ಕಂಪ್ಲೇಟ್ ನೀಡಿದ. ಎಚ್ಚೆತ್ತ ಪೊಲೀಸರು ವಿಚಾರಣೆಗಿಳಿದಾಗ ಒಂದೊಂದೇ ರಹಸ್ಯಗಳು ಬಯಲಾಗತೊಡಗಿದವು.
ಏನಪಾ ಅಂದರೆ ಈ ತಂಡವು ಕಾಲ್ ಸೆಂಟರ್ ಸೋಗಿನಲ್ಲಿ ಯುವಕರನ್ನು ದುರ್ಮಾರ್ಗಕ್ಕೆ ಎಳೆಯುವುದನ್ನೇ ಕಸುಬಾಗಿಸಿಕೊಂಡಿತ್ತು. ಇದಕ್ಕಾಗಿಯೇ ಅನೇಕ ಯುವತಿಯರನ್ನು ನೇಮಿಸಿಕೊಂಡಿತ್ತು.
ರೆವೆನ್ಯೂ ಹಂಚಿಕೆ ಹೀಗಿತ್ತು: 'ಗ್ರಾಹಕರೊಂದಿಗೆ ಹೀಗೆ ಮಾತನಾಡಲು' ಈ ಯುವತಿಯರಿಗೆ ಗಂಟೆಗೆ 20 ರೂ. ಬಟವಾಡೆಯಾಗುತ್ತಿತ್ತು. ಹೀಗೆ 200 ಗಂಟೆಗಳ ಕಾಲ ಮಾತನಾಡಿದ ಯುವತಿಯರಿಗೆ ವಿಶೇಷ ಪ್ರೋತ್ಸಾಹದ ಧನವಾಗಿ 6,000 ರೂ. ನೀಡಲಾಗುತ್ತಿತ್ತು. ಆದರೆ ಒಂದೇ ನಿಮಿಷದಲ್ಲಿ ಮಾತುಕತೆ ವಿಫಲವಾದರೆ ಸದರಿ ಕಾಲ್ ಸೆಂಟರ್ ಆಕೆಗೆ ಯಾವುದೇ ಹಣ ನೀಡುತ್ತಿರಲಿಲ್ಲ.
'ಇನ್ನು ಗ್ರಾಹಕರಿಂದ ಇವರು ಪೀಕುತ್ತಿದ್ದಿದು ಮೊದಲ ನಿಮಿಷಕ್ಕೆ 30 ರೂ. ಆನಂತರದ ಪ್ರತಿ ನಿಮಿಷಕ್ಕೂ 2 ರೂ. ಗಮನಾರ್ಹವೆಂದರೆ ಅನೇಕ ಕಾಲೇಜು ಯುವತಿಯರು ಈ ಕೆಲಸಕ್ಕೆ ನೇಮಕಗೊಂಡಿದ್ದರು. ಅವರಿಗೆಲ್ಲ ಇದು ಪಾಕೆಟ್ ಮನಿ ಆಗುತ್ತಿತ್ತು' ಎಂದು ಸೈಬರ್ ಕ್ರೈಂ ವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ತ್ರಿವೇದಿ ಸಿಂಗ್ ಹೇಳುತ್ತಿದ್ದರು.












Click it and Unblock the Notifications