ಕಾನೂನು ಸಚಿವ ಸುರೇಶ್ ವಿರುದ್ಧ ಎಫ್ಐಆರ್

ಇತ್ತೀಚಿಗೆ ಜಿ ಕೆಟಗೆರಿ ನಿವೇಶನ ಅಕ್ರಮವಾಗಿ ಹೊಂದಿದ್ದ ಆರೋಪ ಪ್ರಕರಣದಲ್ಲಿ ಸುರೇಶ್ ಕುಮಾರ್ ಕ್ಲೀನ್ ಚೀಟ್ ಪಡೆದಿದ್ದರು.
ಅದರೆ, ಶನಿವಾರ(ನ.3) ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ ಪೊಲೀಸರು ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡು ಎಫ್ ಐಆರ್ ಹಾಕಿದೆ.
ದಿನೇಶ್ ಕಲ್ಲಹಳ್ಳಿ ಎಂಬುವರು ನೀಡಿದ ದೂರಿನ ಮೇರೆಗೆ ಬಿಎಂಟಿಎಫ್ ತಂಡ ಕಾನೂನು ಸಚಿವ ಸುರೇಶ್ ಕುಮಾರ್ ಅಲ್ಲದೆ ಮಾಜಿ ವಸತಿ ಸಚಿವ ಕೃಷ್ಣಯ್ಯ ಶೆಟ್ಟಿ ಮತ್ತು ಐಎಎಸ್ ಅಧಿಕಾರಿ ವಿ.ಪಿ. ಬಳಗಾರ್, ಕೆ. ಗೋಪಿನಾಥ್, ಕೆ. ನರಹರಿ ಮತ್ತು ಸೂರ್ಯನಾರಾಯಣ ರಾವ್ ಅವರನ್ನು ಸಹ ಆರೋಪಿಗಳಾಗಿ ಹೆಸರಿಸಲಾಗಿದೆ.
ಆರೋಪಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಅನ್ವಯ 13(1) ಹಾಗೂ 13(2), ಸಿಆರ್ ಪಿಸಿ ಸೆಕ್ಷನ್ 157 ಜೊತೆಗೆ ಐಪಿಸಿ ಸೆಕ್ಷನ್ 120ಬಿ, 149, 166, 218, 406,409 ಹಾಗೂ 420 ಕಲಂ ಅಡಿಯಲ್ಲಿ ಪ್ರಕರಣದಾಖಳಿಸಲಾಗಿದೆ.
ಏನಿದು ಪ್ರಕರಣ: ಲಗ್ಗೆರೆ ಬಳಿ ಇರುವ ಸರ್ವೆ ನಂ. 9/2 ಆರೆಸ್ಸೆಸ್ ಮುಖಂಡ ಮಾಜಿ ಎಂಎಲ್ ಸಿ ನರಹರಿ ಎಂಬುವರ ಸೋದರ ಗೋಪಿನಾಥ್ ಅವರಿಗೆ ಸೇರಿದೆ.
ಸದರಿ 4.2 ಎಕರೆ ಜಮೀನನ್ನು ಸ್ಲಂ ನಿವಾಸಿಗಳಿಗೆ ಮನೆ ನಿರ್ಮಿಸುವ ಸಲುವಾಗಿ 1982ರಲ್ಲಿ ಡಿನೋಟಿಫೈ ಮಾಡಲಾಗಿತ್ತು. 2003ರಲ್ಲಿ ಭೂಮಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. 6 ವರ್ಷ ನಂತರ ಸ್ಲಂ ಬೋರ್ಡ್(Karnataka Slum Development Board (KSDB)) ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿತ್ತು.
ಆದರೆ, ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದ ಕಾಲದಲ್ಲಿ ಸಚಿವ ಸುರೇಶ್ ಕುಮಾರ್ ಅವರು ತಮ್ಮ ಪ್ರಭಾವ ಬಳಸಿ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಗೋಪಿನಾಥ್ ಅವರಿಗೆ ಅನುಕೂಲವಾಗುವಂತೆ ಡಿನೋಟಿಫೈ ಮಾಡಿದ ಸರ್ಕಾರದ ಆದೇಶ ಹೊರಡಿಸಿತ್ತು.
ಸರ್ಕಾರದ ಆದೇಶಕ್ಕೆ ಕಾನೂನು ಕಾರ್ಯದರ್ಶಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಕಾನೂನು ಸಚಿವ ಸುರೇಶ್ ಕುಮಾರ್ ಅವರು ಅಕೌಂಟ್ ಜನರಲ್(AG) ಒಪ್ಪಿಗೆ ಸಿಕ್ಕಿದೆ ಎಂಬ ಕಾರಣ ಕೊಟ್ಟು ಡಿನೋಟಿಫೈ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಗೃಹ ಸಚಿವ ಆರ್ ಅಶೋಕ್ ವಿರುದ್ಧ ಬಗರ್ ಹುಕಂ ಜಮೀನು ಪರಭಾರೆ ಮಾಡಿದ ಆರೋಪದಡಿಯಲ್ಲಿ ಬಿಎಂಟಿಎಫ್ ಎಫ್ ಐಆರ್ ದಾಖಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈಗ ಮತ್ತೊಬ್ಬ ಪ್ರಮುಖ ಸಚಿವರ ವಿರುದ್ಧ ತನಿಖೆ ನಡೆಯುತ್ತಿರುವುದು ಕುತೂಹಲಕಾರಿಯಾಗಿದೆ.












Click it and Unblock the Notifications