ಶಿವಶಂಕರಪ್ಪ ಸಿಎಂ ಅಭ್ಯರ್ಥಿಯಲ್ಲ ಅಂದಿದ್ದೇ ಬಂತು!

ಈ ನಡುವೆ ಶಾಮನೂರು ಶಿವಶಂಕರಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್‍ನಲ್ಲಿರುವ ಲಿಂಗಾಯಿತರು ತಮ್ಮ ಅಸ್ತಿತ್ವದ ಅನಿವಾರ್ಯತೆಗಾಗಿ ಆಗಾಗ ಕೆಪಿಸಿಸಿ ಪಟ್ಟಕ್ಕೆ ಬೇಡಿಕೆ ಇಡುತ್ತಲ್ಲೇ ಬಂದಿದ್ದಾರೆ. ಶಾಮನೂರು ಶಿವಶಂಕರಪ್ಪನವರು ಸಹ ತಮಗೆ ಕೆಪಿಸಿಸಿ ಪಟ್ಟ ಕಟ್ಟಿದರೆ 150 ಸ್ಥಾನಗಳನ್ನು ಗೆಲ್ಲಿಸಿಕೊಡುವುದಾಗಿ ಕೂಡ ಆಗಾಗ ಹೇಳಿಕೆಗಳನ್ನು ನೀಡುತ್ತಲ್ಲೆ ಬಂದಿದ್ದಾರೆ.
ಆದರೆ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲವಂತೆ! ಅಲ್ಲ ಶಾಮನೂರು ಶಿವಶಂಕರಪ್ಪನವರೇ ನೀವೇ ಹೇಳುವಂತೆ 'ನೀವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲದ ಮೇಲೆ ಬೇರೆ ಸಮುದಾಯಗಳು ಬಿಡಿ ಲಿಂಗಾಯಿತ ಸಮುದಾಯದವರಾದರೂ ಯಾಕೆ ತಮ್ಮ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡ್ತಾರೆ?' ಬಿಜೆಪಿಯಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ, ಯಡಿಯೂರಪ್ಪನವರು ಮಾಸ್ ಲೀಡರ್ ಆಗಿ ಮುಂಚೂಣಿಯಲ್ಲಿದ್ದಾರೆ.
ಅಷ್ಟೆಯಾಕೆ ಹಾಲಿ ಸರ್ಕಾರದಲ್ಲಿ 11 ಪ್ರಮುಖ ಖಾತೆಗಳು ಲಿಂಗಾಯಿತ ಕೈಯಲ್ಲಿದೆ. ಕೇಂದ್ರದಲ್ಲಿ ಒಂದೇ ಒಂದು ಸಚಿವ ಸ್ಥಾನ ಕೂಡ ನೀಡದ ಕಾಂಗ್ರೆಸ್ ಗೆ ಲಿಂಗಾಯಿತರು ಮತ ನೀಡಲು ಸಾಧ್ಯವೆ? ಇಂತಹ ಪರಸ್ಥಿತಿಯಲ್ಲಿ ಅತ್ತ ಮಾಸ್ ಲೀಡರ್‍ರೂ ಅಲ್ಲದ, ಇತ್ತ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೂ ಆಗಿರದ ಶಾಮನೂರು ಶಿವಶಂಕರಪ್ಪನವರ ನಾಯಕತ್ವದಿಂದ ಕಾಂಗ್ರೆಸ್ ಬಹುಮತವನ್ನು ನಿರೀಕ್ಷಿಸುವುದಾದರೂ ಹೇಗೆ? ಯಾವ ಸಮುದಾಯಗಳು ಇವರ ನಾಯಕತ್ವಕ್ಕೆ ಒಪ್ಪಿ ಕಾಂಗ್ರೆಸಿಗೆ ಮತ ನೀಡಬಹುದು?
ಒಟ್ಟಾರೆ ಲಿಂಗಾಯಿತ ಮತಗಳು ಈಗಲೂ ಬಿಜೆಪಿ ಜೊತೆಗೆ ಇದೆ. ಒಂದು ಸಂದರ್ಭದಲ್ಲಿ ಯಡಿಯೂರಪ್ಪನವರು ಬೇರೆ ಪಕ್ಷ ಕಟ್ಟಿದರೆ ಆಗ ಲಿಂಗಾಯಿತ ಮತಗಳು ಕೂಡ ಎರಡಾಗುವ ಅವಕಾಶಗಳಿವೆ. ಇದರಲ್ಲಿ ಹಳೆಮೈಸೂರು ಮತ್ತು ಮಧ್ಯ ಕರ್ನಾಟಕದ ಲಿಂಗಾಯಿತರು ಯಡಿಯೂರಪ್ಪನವರ ಬೆಂಬಲಕ್ಕೆ ಉತ್ತರಕರ್ನಾಟಕದ ಲಿಂಗಾಯಿತ ಸಮುದಾಯ ಶೆಟ್ಟರ್ ನಾಯಕತ್ವದ ಪರವಾಗಿ ನಿಲ್ಲುವ ಸೂಚನೆಗಳಿವೆ.
ಇದಕ್ಕೆ ಬಹುಮುಖ್ಯ ಕಾರಣ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮೈಸೂರು ಭಾಗದ ಲಿಂಗಾಯಿತ ಸ್ವಾಮೀಜಿಗಳಿಗೆ, ಮಠ-ಮಾನ್ಯಗಳಿಗೆ ಸಿಕ್ಕ ಮಾನ್ಯತೆ ಉತ್ತರಕರ್ನಾಟಕದ ಸ್ವಾಮಿಗಳಿಗೆ ಅಥವಾ ಮಠಗಳಿಗೆ ಸಿಗಲಿಲ್ಲ ಅನ್ನೋ ಬೇಸರ ಈಗಲೂ ಆ ಭಾಗದಲ್ಲಿದೆ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಅತ್ಯಂತ ಬಲಾಢ್ಯರಾದ 'ಪಂಚಮಸಾಲಿ'ಗಳನ್ನು ಪ್ರವರ್ಗ 2ಎ ಸೇರ್ಪಡೆ ಮಾಡುವ ಅಂಶ ಇದುವರಿವಿಗೂ ಇತ್ಯರ್ಥವಾಗಿಲ್ಲ.
ಇದು ನಾಳೆ ಯಾವ ರೀತಿ ಪರಿಣಾಮ ಬೀರಬಹುದು ಅನ್ನೋದು ಕೂಡ ಕಾದುನೋಡಬೇಕಾದ ವಿಷಯವೆ ಆಗಿರುತ್ತದೆ. ಶೆಟ್ಟರ್ ಪರವಾಗಿರುವ ಎರಡು ಸಕಾರಾತ್ಮಕ ಅಂಶಗಳಂದರೆ ಅವರು ಉತ್ತರ ಕರ್ನಾಟಕದವರು, ಎರಡು ಮುಂದಿನ ಚುನಾವಣೆಯಲ್ಲಿ ಅವರೇ ಪಕ್ಷದ ಮುಖ್ಯಮಂತ್ರಿಯಾಗಿ ಬಿಂಬಿತರಾಗುವ ಅವಕಾಶವಿರುವುದು. ಇದೇ ಕಾರಣದಿಂದಲ್ಲೆ ಶೆಟ್ಟರ್ ತಮ್ಮದೇ ಆದ ಛಾಪು ಆಡಳಿತದಲ್ಲಿ ಮೂಡಿಸಬೇಕೆಂದು ಬಿಜೆಪಿ ಬಯಸುತ್ತಿರುವುದು.












Click it and Unblock the Notifications