ಸ್ಯಾಂಡಿ ಚಂಡಮಾರುತ- 66 ಸಾವು, AI ಹಾರಾಟವಿಲ್ಲ
ಹವಾಯಿ, ಅ.29: Air India ಸಂಸ್ಥೆಯು ಮುಂಬೈ-ನ್ಯೂಯಾರ್ಕ್ (AI 191) ಮತ್ತು ದೆಹಲಿ-ನ್ಯೂಯಾರ್ಕ್ (AI 101) ನಡುವಣ ಸಂಚಾರವನ್ನು ಅನಿರ್ದಿಷ್ಟಾವಧಿಗೆ ರದ್ದುಪಡಿಸಿದೆ. ಸ್ಯಾಂಡಿ ಚಂಡಮಾರುತದಿಂದಾಗಿ ಈ ಹಾರಾಟ ರದ್ದಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ನ್ಯೂಯಾರ್ಕ್, ನ್ಯೂಜೆರ್ಸಿ, ವರ್ಜಿನಿಯಾ, ಕೊಲಂಬಿಯಾ ಮತ್ತು ಮೆಸಾಚುಸೆಟ್ಸ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಮೆಟ್ರೋ ರೈಲ್ವೆ ಸಂಚಾರವನ್ನೂ ಅನೇಕ ಕಡೆಗಳಲ್ಲಿ ಸ್ಥಗಿತಗೊಳಿಸಲಾಗಿದೆ.

ಹಿಂದಿನ ಸುದ್ದಿ: ಅಮೆರಿಕದ ಹಾಲಿ ಅಧ್ಯಕ್ಷ ಬರಾಕ್ ಒಮಾಬಾ 'ಚುನಾವಣೆ' ಎಂಬ ಸುಂಟರಗಾಳಿಗೆ ಸಿಕ್ಕಿ ಪತರಗುಟ್ಟುತ್ತಿದ್ದರೆ ಅಮೆರಿಕದ ಹಲವು ಭಾಗಗಳು 'ಸ್ಯಾಂಡಿ' ಎಂಬ ಸುಂಟರಗಾಳಿಯಿಂದ ತತ್ತರಿಸಿವೆ. ಜತೆಗೆ ಸುನಾಮಿ ಭೀತಿಯೂ ಕಾಡುತ್ತಿದೆ. ಇದುವರೆಗೆ 66 ಮಂದಿ ಸಾವನ್ನಪ್ಪಿದ್ದಾರೆ. ಗೂಗಲ್ ನಲ್ಲಿಯೂ ಅಲರ್ಟ್ ಘೋಷಿಸಲಾಗಿದೆ.
ನ್ಯೂಯಾರ್ಕ್ ಮಹಾನಗರಕ್ಕೂ ಚಂಡಮಾರುತ ಅಪ್ಪಳಿಸಲಿದೆ. US Geological Survey ಇಲಾಖೆಯ ಪೂರ್ವ ಕರಾವಳಿಯಲ್ಲಿ ಕೆಲವೆಡೆ ಸೋಮವಾರ (ಅ.29) ಭಾರಿ ಸುಂಟರಗಾಳಿ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಎಚ್ಚರಿಕೆ ನೀಡಿದೆ.
ಭಯಾನಕ, ಭಾರಿ ಸುಂಟರಗಾಳಿ ಎಂದ ಒಬಾಮಾ: ಅಮೆರಿಕವನ್ನು ಆಗಾಗ ವ್ಯಾಪಕವಾಗಿ ಕಾಡುವ ಸುಂಟರಗಾಳಿ ಈ ಬಾರಿ 8 ರಾಜ್ಯಗಳಿಗೆ ಅಪ್ಪಳಿಸಿದೆ. ಈ ಅಪೂರ್ವ Hurricane Sandy ಪೂರ್ವ ಕರಾವಳಿ ಭಾಗದಲ್ಲಿ ಲಕ್ಷಾಂತರ ಜನರಿಗೆ ಕಂಟಕವಾಗಿದೆ. ಈ ಮಧ್ಯೆ, ಕೆನಡಾದ ಪಶ್ಚಿಮ ಕರಾವಳಿಯ ಚಾರ್ಲೊಟ್ ದ್ವೀಪದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅಮೆರಿಕದ ಹವಾಯಿ ದ್ವೀಪಕ್ಕೆ ಸುನಾಮಿ ಬೆದರಿಕೆ ಉಂಟಾಗಿದೆ.
ಸುಂಟರಗಾಳಿ ಹಿನ್ನೆಲೆಯಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಮಿಟ್ ರೋಮ್ನಿ ಅವರು ತಮ್ಮ ಅನೇಕ ಪ್ರಚಾರ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಒಬಾಮಾಗೆ ಸುಂಟರಗಾಳಿ ಕುರಿತು ಸತತ ಮಾಹಿತಿ ನೀಡಲಾಗುತ್ತಿದೆ. ಸುಂಟರಗಾಳಿಯನ್ನು ಎದುರಿಸಲು ಎಲ್ಲ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚನೆಯಿತ್ತಿದ್ದಾರೆ.
ಕೆರಿಬಿಯನ್ ಮೂಲಕ ಉತ್ತರದತ್ತ ತಿರುಗಿದ ಸ್ಯಾಂಡಿ ಸುಂಟರಗಾಳಿ ತನ್ನ ಹಾದಿಯುದ್ದಕ್ಕೂ ವಿನಾಶವನ್ನೆಬ್ಬಿಸುತ್ತ ಸಾಗಿಬಂದಿದೆ. ಹೈಟಿಯಲ್ಲಿ 29 ಮಂದಿ ಸಾವಿಗೀಡಾಗಿದ್ದರೆ ಕ್ಯೂಬಾ, ಜಮೈಕ, ಪನಾಮ, ಡೊಮಿನಿಕ್ ಗಣರಾಜ್ಯ ಮತ್ತು ಪೋರ್ಟೊ ರಿಕೋದಲ್ಲಿ 16 ಮಂದಿ ಬಲಿಯಾಗಿದ್ದಾರೆ.
ಸ್ಯಾಂಡಿ ಸುಂಟರಗಾಳಿ ಚಾರ್ಲ್ಸ್‌ಟನ್‌ನಿಂದ 355 ಮೈಲು ಪೂರ್ವ-ಆಗ್ನೇಯ ಮತ್ತು ಉತ್ತರ ಕೆರೊಲಿನಾದ ಕೇಪ್ ಹ್ಯಾಟರಾಸ್‌ನ ದಕ್ಷಿಣಕ್ಕೆ 330 ಮೈಲು ದೂರದಲ್ಲಿ ಕೇಂದ್ರೀಕೃತವಾಗಿತ್ತು.












Click it and Unblock the Notifications