ಬೆಂಗಳೂರಿನಲ್ಲಿ ಅತಿ ದೊಡ್ಡ ಆಭರಣ ಮೇಳ
ಬೆಂಗಳೂರು, ಅ.26: ಭಾರತದಲ್ಲಿ ಅತಿ ದೊಡ್ಡ ಆಭರಣ ಮೇಳ ನಗರದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿದೆ. ವಿವಿಧ ಮಾದರಿಯ ಚಿತ್ತಾಕರ್ಷಕ ಆಭರಣಗಳನ್ನು ಒಂದೇ ವೇದಿಕೆಯಲ್ಲಿ ಖರೀದಿಸಬಹುದಾದ ಅವಕಾಶ ಇದಾಗಿದೆ. ಹೇಗೂ ವಾರಾಂತ್ಯ ರಜೆ ಮೂಡ್ ನಲ್ಲಿ ಮೇಳಕ್ಕೆ ಹೋಗಿ ಬಂದರೆ ಹಬ್ಬದ ಸಾಲಿನಲ್ಲಿ ಒಂದಷ್ಟು ಚಿನ್ನಾಭರಣ ಖರೀದಿ ಮಾಡುವ ಅವಕಾಶ ಪ್ರಾಪ್ತಿಯಾಗುತ್ತದೆ.
ಹೌದು, Jewel Of India ಆಭರಣ ಮೇಳವು ಇದೇ ಅಕ್ಟೋಬರ್ 27, 28 ಮತ್ತು 29 ರಂದು ವಿಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲಿನ ವಿಶಾಲ ಮೈದಾನದಲ್ಲಿ ನಡೆಯಲಿದೆ. ಈ ಬಾರಿ ಆಭರಣ ಮೇಳಕ್ಕೆ 1 ಲಕ್ಷ ಮಂದಿ ಭೇಟಿ ನೀಡುವ ಅಂದಾಜಿದೆ.
ಸದ್ಯದಲ್ಲೇ 10 ಗ್ರಾಂ ಚಿನ್ನದ ಬೆಲೆ 35 ಸಾವಿರ ರೂ.: ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ.ಶರವಣ ಮಾತನಾಡಿ, ಕಳೆದ ವರ್ಷಕ್ಕಿಂತ ಈ ವರ್ಷ ಚಿನ್ನದ ಬೆಲೆ ಶೇ. 20ರಷ್ಟು ಹೆಚ್ಚಾಗಿದೆ. ಆದರೂ, ಗ್ರಾಹಕರು ಚಿನ್ನದ ಖರೀದಿಯಿಂದ ಹಿಂದೆ ಸರಿದಿಲ್ಲ. ಇದು ಮೇಳಕ್ಕೆ ಸ್ಫೂರ್ತಿದಾಯಕವಾಗಿದೆ. ಅಲ್ಲದೇ, ಹಳೆಯ ಆಭರಣಗಳನ್ನು ಕೊಟ್ಟು ಹೊಸ ಆಭರಣಗಳನ್ನು ಕೊಂಡುಕೊಳ್ಳಲೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮೇಳದಲ್ಲಿ ಪ್ರತಿ ಬಾರಿಯೂ ಹೊಸತನಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಪ್ರತಿಯೊಬ್ಬರಿಗೂ ಒಪ್ಪುವಂತಹ ಆಭರಣಗಳು ಇಲ್ಲಿ ಲಭ್ಯವಾಗಲಿದೆ ಎಂದು ಮೇಳದ ರಾಯಭಾರಿ ನಟಿ ಸುಮಲತಾ ಅಂಬರೀಷ್ ತಿಳಿಸಿದ್ದಾರೆ.
ಅಯ್ಯೋ ಅದು ದೊಡ್ಡ ಗ್ರಾಹಕರಿಗೆ ಮಾತ್ರ ಸಲ್ಲುವಂತಹುದು ಸಣ್ಣಪುಟ್ಟ ಖರೀದಿದಾರರು ಇಲ್ಲೇ ಮನೆ ಸಮೀಪವಿರುವ ಅಂಗಡಿಗಳಲ್ಲಿ ಖರೀದಿಸಿದರಾಯಿತು ಎಂದುಕೊಂಡು ಸುಮ್ಮನಾಗಬೇಡಿ. ಏಕೆಂದರೆ ಆಭರಣ ಮೇಳದ ಸಂಯೋಜಕ ಸಂದೀಪ್ ಬೇಕಲ್ ಹೇಳುವಂತೆ ಎಲ್ಲ ಸ್ತರದ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಆಭರಣ ಮೇಳವನ್ನು ಆಯೋಜಿಸಲಾಗಿದೆ. ದೇಶದಲ್ಲಿರುವ ಸುಮಾರು 120ಕ್ಕೂ ಹೆಚ್ಚು ಜ್ಯುವೆಲರ್ ಗಳು ಭಾಗವಹಿಸಲಿದ್ದಾರೆ. ಹಬ್ಬ ಹಾಗೂ ಮದುವೆ ಸಮಯವಾಗಿರುವುದರಿಂದ ಆಭರಣ ಖರೀದಿಸಲು ಸೂಕ್ತ ಸಮಯ ಎಂಬ ಒಕ್ಕಣೆ ಅವರದು.
ಯಾವೆಲ್ಲ ಆಭರಣಗಳು ಲಭ್ಯ:
ಈ ಬಾರಿ ಮೇಳದಲ್ಲಿ ಜೈಪುರದ ಮೀನಾಕ್ಷಿ ಹಾಗೂ ಕುಂದನ್, ಹೈದರಾಬಾದಿನ ಮುತ್ತಿನ ಆಭರಣ, ಮುಂಬೈನ ಬ್ರಾಂಡೆಡ್ ಮತ್ತು ಡಿಸೈನರ್, ಗುಜರಾತ್‌ನ ಕರಕುಶಲ, ರಾಜಸ್ಥಾನದ ತೆವಾ, ಕೋಲ್ಕತ್ತಾದ ಕರಕುಶಲ ಹಾಗೂ ಟ್ರೈಬಲ್ ಡಿಸೈನ್, ಬೆಂಗಳೂರು, ತಮಿಳುನಾಡಿನ ಟೆಂಪಲ್ ಮತ್ತು ಆ್ಯಂಟಿಕ್, ಬರ್ಮಾದ ರೂಬಿ, ದಕ್ಷಿಣ ಭಾರತದ ಬ್ರೈಡಲ್ ಕಲೆಕ್ಷನ್, ಫ್ಯೂಶನ್ ಆಭರಣಗಳು ಪ್ರದರ್ಶನ ಹಾಗೂ ಮಾರಾಟಕ್ಕಿವೆ. ದೇಶದ ವಿವಿಧೆಡೆಗಳಿಂದ ಆಭರಣ ತಯಾರಕರು ಹಾಗೂ ಮಾರಾಟಗಾರರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ.


Click it and Unblock the Notifications
