ಭಾನುವಾರ ರಾಹುಲ್ ಕ್ಯಾಬಿನೆಟ್ ಸೇರುವ ಸಾಧ್ಯತೆ?

ತೃಣಮೂಲ ಕಾಂಗ್ರೆಸ್ ಸಚಿವರ ರಾಜೀನಾಮೆಯ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟದ ಪುನಾರಚನೆ ಅನಿವಾರ್ಯವಾಗಿದೆ. ಒಟ್ಟು 9 ಕ್ಯಾಬಿನೆಟ್ ಸ್ಥಾನಗಳನ್ನು ತುಂಬಬೇಕಿದೆ.
ಪ್ರಧಾನಿ ಮನಮೋಹನ್‌ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಇತ್ತೀಚೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸಂಪುಟ ಪುನಾರಚನೆಯ ಕುರಿತು ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ.
ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅವರು ಸಚಿವ ಸಂಪುಟ ಸೇರ್ಪಡೆಯಾಗುವುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಅತ್ಯಗತ್ಯ ಎನ್ನಲಾಗಿದೆ. ಪ್ರಧಾನಿ ಪಟ್ಟಕ್ಕೇರುವ ಮೊದಲು ರಾಹುಲ್ ಗಾಂಧಿಯನ್ನು ಹಂತ ಹಂತವಾಗಿ ರಾಜಕೀಯವಾಗಿ ಮೇಲಕ್ಕೇರಿಸುವ ಪ್ರಕ್ರಿಯೆ ಅವಿರತವಾಗಿ ಸಾಗಿದೆ.
2014ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೇಳಿಕೊಂಡಿದ್ದಾರೆ.
ಸಾಮಾಜಿಕ ಅಭಿವೃದ್ಧಿ ಖಾತೆಯಲ್ಲಿ ಸಾಮಾಜಿಕ ಕಲ್ಯಾಣ, ದಲಿತ ಹಾಗೂ ಬುಡಕಟ್ಟು ಜನಾಂಗ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸೇರಿಕೊಳ್ಳಲಿದೆ. ಸಮಗ್ರ ಸಾಮಾಜಿಕ ಅಭಿವೃದ್ಧಿ ಹಾಗೂ ಮೂಲ ಸೌಕರ್ಯ ಕಲ್ಪಿಸುವುದು ಈ ಖಾತೆಯ ಹೊಣೆಗಾರಿಕೆಯಾಗಿರುತ್ತದೆ.
ರಾಹುಲ್ ಅವರ ಯುವಪಡೆಯ ಗೆಳೆಯರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ಮಾನ ಸಿಗುವ ಸಾಧ್ಯತೆಯಿದೆ. ಸಂಭಾವ್ಯ ಸಚಿವರ ಸಾಲಿನಲ್ಲಿ ಕಾಂಗ್ರೆಸ್‌ನ ಯುವ ಸಂಸದರಾದ ಮನಿಕಾ ಠಾಗೋರ್ ಹಾಗೂ ಮೀನಾಕ್ಷಿ ನಟರಾಜನ್ ಅವರ ಹೆಸರುಗಳೂ ಕೇಳಿಬರುತ್ತಿವೆ.
ಸಚಿನ್ ಪೈಲಟ್, ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಜಿತಿನ್ ಪ್ರಸಾದ್ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಭಡ್ತಿ ಪಡೆಯುವ ಸಾಧ್ಯತೆಯಿದೆ.
ತೃಣಮೂಲ ಕಾಂಗ್ರೆಸ್‌ನ ಆರು ಸಚಿವರು ಸಂಪುಟದಿಂದ ನಿರ್ಗಮಿಸಿರುವ ಕಾರಣ, ಪಶ್ಚಿಮ ಬಂಗಾಳದ ಎರಡು ಅಥವಾ ಮೂರು ಕಾಂಗ್ರೆಸ್ ನಾಯಕರಿಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಿದೆ.ಇವರಲ್ಲಿ ದೀಪಾದಾಸ್ ಮುನ್ಶಿ ಪ್ರಮುಖರಾಗಿದ್ದಾರೆ.
ಡಿಎಂಕೆ ಬೇಡಿಕೆ : 2ಜಿ ಹಗರಣ ಆರೋಪಿ ಎ ರಾಜಾ ಹಾಗೂ ಮಾಜಿ ಜವಳಿ ಸಚಿವ ದಯಾನಿಧಿ ಮಾರನ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಡಿಎಂಕೆ ಹೊಸಬರನ್ನು ಸೇರಿಸಲು ಇಚ್ಛಿಸಿದೆ. ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ತಮ್ಮ ಪುತ್ರಿ ಕನ್ನಿಮೋಳಿ ಅವರನ್ನು ಕೂರಿಸಲು ಸಿದ್ಧತೆ ನಡೆಸಿದ್ದಾರೆ.
ಪಿಎ ಸಂಗ್ಮಾ ಅವರ ಪುತ್ರಿ ಯುವ ಸಹಾಯಕ ಸಚಿವೆ ಅಗಥಾ ಸಂಗ್ಮಾಗೆ ಕೊಕ್ ನೀಡುವುದು ಬಹುತೇಕ ಖಚಿತವಾಗಿದ್ದು, ಎನ್ ಸಿಪಿಯ ತಾರೀಖ್ ಅನ್ವರ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಯುಪಿಎ ತಯಾರಿ ನಡೆಸಿದೆ.
ಈ ನಡುವೆ ಬಹು ದಿನಗಳಿಂದ ಜಾತಕ ಪಕ್ಷಯಂತೆ ಕಾದು ಕುಳಿತಿರುವ ಹಾಲಿ ರಾಜ್ಯಸಭಾ ಸದಸ್ಯ ನಟ ಕಮ್ ರಾಜಕಾರಣಿ ಚಿರಂಜೀವಿ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಮಾನ ಗ್ಯಾರಂಟಿ ಎಂದು ತೆಲುಗು ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದೆ. ಯಾವುದಕ್ಕೂ ಭಾನುವಾರ ಯುಪಿಎ ಕ್ಯಾಬಿನೆಟ್ ಸರ್ಜರಿಯಾದ ಮೇಲೆ ಗೊತ್ತಾಗಲಿದೆ.












Click it and Unblock the Notifications