ಪ್ರೀತಿಯಲಿ ಸೋತ ಸನ್ನಿ, ದುಬಾರಿ ಲಾಟರಿ ಗೆದ್ದ

dumped-by-gf-indian-youth-wins-dollar-30-mn-jackpot-us
ವಾಷಿಂಗ್ಟನ್‌, ಅ. 20: ಹೆಣ್ಣಿಗೆ ಸಹನೆ ಹೆಚ್ಚು, ಕ್ಷಮಯಾ ಧರಿತ್ರಿ ಅಂತೆಲ್ಲ ಹೇಳುತ್ತಾರೆ. ಈ ಕಥಾನಕದ ನಾಯಕಿ ಒಂದೇ ಒಂದು ದಿನ ತನ್ನ ಪ್ರೇಮವನ್ನು ಪೊರೆದಿದ್ದರೆ ಅರ್ಥಾತ್ ಪ್ರೀತಿಗಾಗಿ ಹಂಬಲಿಸಿದವನನ್ನು ಸಹಿಸಿಕೊಂಡಿದ್ದಿದ್ದರೆ... ಈ 'ರೆ' ಪ್ರಪಂಚವೇ ಹಾಗೆ ಎನೂ ಬೇಕಾದರೂ ಇಲ್ಲಿ ಘಟಿಸಬಹುದು.

ಏನಾಯತಪ್ಪಾ ಅಂದರೆ ಈ ಕಥಾನಕದ ಹೀರೋಗೆ 'ನೀನೊಬ್ಬ ದೊಡ್ಡ ಜೀರೋ. ನಿನ್ಹತ್ರ ನಯಾಪೈಸೆ ಕಾಸಿಲ್ಲ. ನಿನ್ನನ್ನು ಮದ್ವೆಯಾದ್ರೆ ನನ್ನ ಬಾಳೂ ಅಷ್ಟೇಯಾ' ಎಂದು ಸ್ವಾಟೆ ತಿರುಗಿಸಿಕೊಂಡು, ಸದರಿ ಕಥಾನಾಯಕನನ್ನು ಒದ್ದುಕೊಂಡು ನಡೆದೇ ಬಿಟ್ಟಳು. ಆದರೆ ಅತ್ತ ಈ ಪ್ರೇಮ ದೇವತೆ ಹಾಗೆ ಕೈಚೆಲ್ಲಿ ಹೋಗಿದ್ದೇ ತಡ ಒಂದಿನಿತೂ ತಡ ಮಾಡದೆ ಅಂದರೆ ಮಾರನೆಯ ದಿನವೇ ಅದೃಷ್ಟ ಲಕ್ಷ್ಮಿ ಕಥಾನಾಯಕನ ಮನೆಯಂಗಳದಲ್ಲಿ ಕಾಲುಮುರಿದುಕೊಂಡು ಬಿದ್ದುಬಿಟ್ಟಳು.

ಆತನ ಜೀವನಪರ್ಯಂತವಷ್ಟೇ ಅಲ್ಲ, ಆತನ ಮಕ್ಕಳು, ಮರಿಮೊಮ್ಮಕ್ಕಳಿಗೂ ಇನ್ಯಾವ ಪ್ರೇಮ ದೇವತೆಯೂ ಕೈಕೊಡುವ ಪರಿಸ್ಥಿತಿ ಉದ್ಭವವಾಗಬಾರದು ಎಂದು ಬರೋಬ್ಬರಿ 30.5 ದಶಲಕ್ಷ ಡಾಲರ್‌ ಬಹುಮಾನ ಮೊತ್ತದ 'ಲಾಟರಿ ಲಕ್ಷ್ಮಿ' ಕಥಾನಾಯಕನಿಗೆ ಒಲಿದಿದ್ದಾಳೆ. ಹೌದು, ಪ್ರೀತಿ-ಪ್ರೇಮವೂ ಲಾಟರಿಯೇ ಅಲ್ವಾ!?

ಏನಾಯಿತಪಾ ಅಂದ್ರೆ ... ಅಮೆರಿಕದ ಮೆಸಾಚುಸೆಟ್ಸ್‌ನ ಹ್ಯಾನ್ನಿಸ್‌ನಲ್ಲಿರುವ ಭಾರತೀಯ ಮೂಲದ ವ್ಯಕ್ತಿ ಒಂದು ಲಾಟರಿ ಟಿಕೆಟ್ ಖರೀದಿಸಿದ್ದ. ಅದನ್ನು ಜೇಬಲ್ಲಿಟ್ಟುಕೊಂಡು ಭವಿಷ್ಯದ ಕನಸು ಕಾಣತೊಡಗಿದ. ಸುಂದರ ಭವಿಷ್ಯದ ಬೆನ್ನೇರಿ ಜತೆಗಿರಲಿ ಎಂದು ಒಂದು ಹುಡುಗಿಯನ್ನೂ ಪ್ರೀತಿಸತೊಡಗಿದ. ಅವಳೂ ಸ್ಪಂದಿಸಿದಳು. ಆದರೆ ಹೆಚ್ಚು ದಿನ ಕಾಯದೇ ಹೋದಳು. ಇನ್ನು ನನ್ನಿಂದಾಗೊಲ್ಲ. ನಿನ್ಹತ್ರ ಒಂದು ಕಾಸೂ ಇಲ್ಲ, ಹೋಗ್ ಎಂದು ಅವನ ಮುಖಕ್ಕೆ ಹೊಡೆದ ಹಾಗೆ ಹೇಳಿಬಿಟ್ಟಳು.

ಅಂದಹಾಗೆ ಕಳೆದ ಶನಿವಾರ ಲಾಟರಿ ಲಕ್ಷ್ಮಿಯನ್ನು ಒಲಿಸಿಕೊಂಡಿರುವ 22 ವರ್ಷದ ಈ ಕಥಾನಾಯಕನ ಹೆಸರು ಸಂದೀಪ್‌ @ ಸನ್ನಿ ಸಿಂಗ್‌. ಭಾರಿ ಮೊತ್ತದ ಲಾಟರಿ ಗೆದ್ದ ತಕ್ಷಣ ಆತನನ್ನು ಸುದ್ದಿಗಾರರು 'ಏನ್ ಮಾಡ್ತೀಯಾ ಇಷ್ಟೊಂದು ದುಡ್ಡಿನಿಂದ? ಯಾರಾದರೂ ಗೆಳತಿಯರು ಇದ್ದಾರೆಯೇ' ಎಂದು ಕೇಳಿದಾಗ 'ಸದ್ಯಕ್ಕೆ ಅಂತಹ ಅದೃಷ್ಟವಂತೆಯರು ಯಾರೂ ಇಲ್ಲ. ಇದ್ದವಳು ನಿನ್ನೆ ತಾನೇ ಹೊರಟು ಹೋಗಿದ್ದಾಳೆ' ಎಂದು ಸನ್ನಿ ಹೇಳಿದ್ದಾನೆ.

'ನಿನ್ನೆ ಅವಳು ಕೈಕೊಟ್ಟಾಗ ಪರಮ ದುಃಖಿತನಾಗಿದ್ದೆ. ಆದರೆ ಇಂದು ಪರಮಸುಖಿ. ಪರಮ ಅದೃಷ್ಟವಂತ, ಥ್ಯಾಂಕ್ ಗಾಡ್' ಎಂದಿದ್ದಾನೆ. ಅಂದಹಾಗೆ ಈತ ಒಟ್ಟು 61 ದಶಲಕ್ಷ ಡಾಲರ್ ಮೊತ್ತದ ಲಾಟರಿಯನ್ನು ಜಂಟಿಯಾಗಿ ಗೆದ್ದಿದ್ದಾನೆ. ಹಾಗಾಗಿ ಈತನಿಗೆ ಅದರರ್ಧ ಅಂದರೆ 30.5 ದಶಲಕ್ಷ ಡಾಲರ್ ಮೊತ್ತ ಸಮದಾಯವಾಗಲಿದೆ. ಆದರೆ ತೆರಿಗೆಗಳೆಲ್ಲ ಹೋಗಿ 16.1 ದಶಲಕ್ಷ ಡಾಲರ್ ಬರುತ್ತದೆ. Not a small amount!

'ಪೋಷಕರಿಗೆ ನೆರವಾಗಲು ಎರಡೆರಡು ಕೆಲ್ಸ ಮಾಡ್ತಿದೆ. ಈಗ ಮೊದಲು, ಪದವಿ ಶಿಕ್ಷಣ ಮುಂದುವರಿಸುವೆ. ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವೆ. ಒಂದಷ್ಟು ದಾನ ಧರ್ಮವನ್ನೂ ಮಾಡುವೆ' ಎಂದು ಸನ್ನಿ ತನ್ನ ಭವಿಷ್ಯದ ಸುಳಿವು ನೀಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+