ದೇವೇಗೌಡರ ಪಾದರಕ್ಷೆ ಹೊತ್ತು ಜೆಡಿಎಸ್ ಪಕ್ಷಕ್ಕೆ ದುಡಿಯುವೆ

ಇಲ್ಲಿನ ಪ್ರವಾಸಿ ಮಂದಿರದ ಬಳಿ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದ ಚೆನ್ನಿಗಪ್ಪ, ಬಹಳ ವರ್ಷಗಳಿಂದ ನಾನು ಜೆಡಿಎಸ್ ನಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದೇನೆ. ಮಾಜಿ ಸಿಎಂ ಕುಮಾರಸ್ವಾಮಿಯವರ ಅಧಿಕಾರದ ಅವಧಿಯಲ್ಲಿ ಕೂಡಾ ನಾನು ಸಚಿವನಾಗಿ ದುಡಿದಿದ್ದೆ. ಕೆಲವು ಕಾಲ ಕಾರಣಾಂತರದಿಂದ ಪಕ್ಷದ ಚಟುವಟಿಕೆಗಳಿಂದ ದೂರವಿರಬೇಕಾಯಿತು ಎಂದು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಬೇಕೆನ್ನುವ ಇರಾದೆ ಹೊಂದಿದ್ದೇನೆ. ಬಿಜೆಪಿ ಮತ್ತು ಕಾಗ್ರೆಸ್ ಪಕ್ಷದ ಇದುವರೆಗಿನ ದುರಾಡಳಿತದಿಂದ ಈ ಕ್ಷೇತ್ರದ ಜನತೆ ಬೇಸತ್ತಿದ್ದಾರೆ. ಈ ಬಾರಿ ಜೆಡಿಎಸ್ ಬಗ್ಗೆ ದೊಡ್ಡಬಳ್ಳಾಪುರದ ಜನತೆ ವಿಶ್ವಾಸ ಹೊಂದಿದ್ದಾರೆ ಎಂದು ಚೆನ್ನಿಗಪ್ಪ ಹೇಳಿದ್ದಾರೆ.
ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ಕ್ಷೇತ್ರದಲ್ಲಿ ದೇವೇಗೌಡ ದಂಪತಿಗಳ ಹೆಸರಿನಲ್ಲಿ ನಿರ್ಮಿಸಲಾಗಿರುವ ಅತಿಥಿಗೃಹ ಉದ್ಘಾಟಿಸಿದ ಚೆನ್ನಿಗಪ್ಪ ಮಾನವ ಧರ್ಮ ದೊಡ್ಡದು. ದುರಾಸೆ ಸಲ್ಲದು, ನೊಂದವರಿಗೆ ಸಹಾಯ ಮಾಡುವ ಬುದ್ದಿಯನ್ನು ಜನತೆ ಕಲಿಯಬೇಕೆಂದು ತಿಳಿಸಿದರು. ಈ ಅತಿಥಿಗೃಹವನ್ನು ಚೆನ್ನಿಗಪ್ಪ ತನ್ನ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಅವರು ಇಂಥಹ ಕೆಲಸಕ್ಕೆ ಮುಂದಾಗಬಾರದಿತ್ತು. ಇದರ ಪ್ರತಿಫಲವನ್ನು ಒಂದಲ್ಲಾ ಒಂದು ದಿನ ಅವರು ಅನುಭವಿಸುತ್ತಾರೆ ಎಂದು ಚೆನ್ನಿಗಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.
ಹಣ ಮತ್ತು ಅಧಿಕಾರ ಎಂದೂ ಶಾಶ್ವತವಲ್ಲ. ಅದು ಇದ್ದಾಗ ಎಷ್ಟು ಜನರಿಗೆ ಸಹಾಯ ಮಾಡಿದ್ದೇವೆ ಎನ್ನುವುದಷ್ಟೇ ಮುಖ್ಯ. ದೇವೇಗೌಡ ಮತ್ತು ಕುಮಾರಸ್ವಾಮಿಯವರು ನನ್ನ ಮೇಲೆ ನಂಬಿಕೆಯಿಟ್ಟು ಪಕ್ಷದ ಬಲಾಭಿವೃದ್ದಿಯ ಜವಾಬ್ದಾರಿ ನೀಡಿದರೆ ಶಿರಸಾ ವಹಿಸಿ ಮಾಡುತ್ತೇನೆ ಎಂದು ಚೆನ್ನಿಗಪ್ಪ ಸ್ವಾಮಿ ಮತ್ತು ಪಕ್ಷ ನಿಷ್ಠೆ ಮೆರೆದಿದ್ದಾರೆ.
ಆಪರೇಷನ್ ಕಮಲದ ಮೂಲಕ ಜೆಡಿಎಸ್ ನಿಂದ ಬಿಜೆಪಿಗೆ ಹಾರಿ ಮಧುಗಿರಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ವಿರುದ್ದ ಚೆನ್ನಿಗಪ್ಪ ಹೀನಾಯವಾಗಿ ಪರಾಭಾವಗೊಂದಿದ್ದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದು.












Click it and Unblock the Notifications