ಕರ್ನಾಟಕದ ಮುರ್ನಾಲ್ಕು ಜಿಲ್ಲೆಗಳಲ್ಲಿ ಭೂ ಕಂಪನ

ಭಾನುವಾರ ಮಧ್ನಾನ್ಹ ಸುಮಾರು 2 ಗಂಟೆ 27 ನಿಮಿಷಕ್ಕೆ ಭೂಮಿ ಕಂಪಿಸಿದೆ. 3 ರಿಂದ 4 ಸೆಕೆಂಡುಗಳ ಕಾಲ ಭೂಕಂಪನವಾಗಿರುವುದು ವರದಿಯಾಗಿದೆ. ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವರಿಗೆ ಭೂ ಕಂಪನದ ಅನುಭವಗಿಂತ ನೆರೆ ಹೊರೆಯವರು ಆತಂಕದಿಂದ ಓಡಿ ಬಂದಿದ್ದು ಕಂಡು ಏನೋ ಆನಾಹುತ ಸಂಭವಿಸಿದೆ ಎಂದೆನಿಸಿದೆ.
ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲೆಗಳಲ್ಲಿ ಭೂ ಕಂಪನದ ಅನುಭವವಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಹಾಸನದ ಸಕಲೇಶಪುರ, ಕೊಡಗಿನ ಮಡಿಕೇರಿ, ಸೋಮವಾರ ಪೇಟೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಕುಕ್ಕೆ ಸುಬ್ರಮಣ್ಯ ಮುಂತಾದೆಡೆ ಭೂಕಂಪನವಾಗಿದೆ. ಆದರೆ, ಎಲ್ಲೂ ಕೂಡಾ ಯಾವುದೇ ಹಾನಿ ಸಂಭವಿಸಿದ ಬಗ್ಗೆ ಮಾಹಿತಿ ಇಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಮಾರು 30 ಮನೆಗಳಲ್ಲಿ ಬಿರುಕು ಉಂಟಾಗಿದೆ. ಮರ್ಕಂಜ, ಪೆರಾಜೆ ಪ್ರದೇಶದಲ್ಲೂ ಭೂಕಂಪನ ಅನುಭವವಾಗಿದೆ.
ಆತಂಕದಲ್ಲಿ ಕೊಡಗಿನ ಜನತೆ: ಕಳೆದ ಆಗಸ್ಟ್ 16 ರಂದು ಲಘು ಭೂ ಕಂಪನದ ಅನುಭವದಿಂದ ಗಾಬರಿಗೊಂಡಿದ್ದ ಕೊಡಗಿನ ಜನತೆ, ಭಾನುವಾರ(ಅ.14) ಮತ್ತೊಮ್ಮೆ ಕಂಪನವಾಗಿರುವುದಕ್ಕೆ ಬೆಚ್ಚಿದ್ದಾರೆ.
ಶನಿವಾರ ಸಂತೆ, ಕೂಗೂರು, ಗೋಣಿಮರೂರು, ಕಟ್ಟೆಪುರ, ಆಲೂರು, ಸಿದ್ದಾಪುರ ಮುಂತಾದ ಕಡೆಗಳಲ್ಲಿ ಕಳೆದ ತಿಂಗಳು ಕಂಪನದ ಅನುಭವವಾಗಿತ್ತು. ಆದರೆ, ಸುಂಟಿಕೊಪ್ಪ, ಸೋಮವಾರಪೇಟೆ, ಮಾದಾಪುರ, ಶಾಂತಳ್ಳಿ, ಬೀಡಳ್ಳಿ, ಕುಶಾಲನಗರ ಭಾಗದ ಜನತೆ ಯಾವುದೇ ಅನುಭವಗಳಾಗಿರಲಿಲ್ಲ.
ಜೂನ್ ಹಾಗೂ ಆಗಸ್ಟ್ ತಿಂಗಳಿನಲ್ಲಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಕಂಪನದ ಅನುಭವವಾಗಿತ್ತು. ಮೂಡಿಗೆರೆ ಬಳಿ ಸುಮಾರು 20 ಮನೆಗಳು ಜಖಂಗೊಂಡಿತ್ತು.
ಆತಂಕ ಬೇಡ: ಈ ರೀತಿ ಲಘು ಕಂಪನಗಳಾಗುವುದು ಮಾಮೂಲಿ. ರಿಕ್ಚರ್ ಮಾಪಕದಲ್ಲಿ ಸುಮಾರು 3.5 ತೀವ್ರತೆ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣ ಅಂದರೆ ಸುಮಾರು 4 ರಿಂದ 8 ರ ತನಕ ಕಂಡು ಬಂದರೆ ಆತಂಕಕಾರಿ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications