ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಅನಾವರಣ
ಬೆಳಗಾವಿ, ಅ.11: ಉತ್ತರ ಕರ್ನಾಟಕ ಮಂದಿಯ ಬಹುದಿನದ ಕನಸು ನನಸಾಗಿದೆ. ಕುಂದಾನಗರಿಯಲ್ಲಿ ಸುವರ್ಣ ವಿಧಾನ ಸೌಧವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಗುರುವಾರ(ಅ.11) ಲೋಕಾರ್ಪಣೆ ಮಾಡಿದರು.
ನೂತನ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ವೈಭವೋಪೇತ ವೇದಿಕೆಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ನೆರೆದಿದ್ದ ಸಾವಿರಾರು ಜನರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಅವರು ಬೆಳಗಾವಿ ಕಡೆಯ ಪಗಡಿ(ಪೇಟ) ಧರಿಸಿ ರಾಜಕಳೆಯಿಂದ ಕಂಗೊಳಿಸುತ್ತಿದ್ದರು.

ಭಾಗ್ಯದ ಬಾಗಿಲು ತೆರೆದಿದೆ: ಸುವರ್ಣ ವಿಧಾನಸೌಧದ ಮೂಲಕ ಉತ್ತರ ಕರ್ನಾಟಕ ಭಾಗದ ಜನರಿಗೆ ಭಾಗ್ಯದ ಬಾಗಿಲು ತೆರೆದಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಉತ್ತರ ಕರ್ನಾಟಕಕ್ಕೆ ಮಾತ್ರವಲ್ಲ ಸಮಸ್ತ ಕರ್ನಾಟಕದ ಪಾಲಿಗೆ ಇದೊಂದು ಐತಿಹಾಸಿಕ ದಿನ, ಮುಖ್ಯಮಂತ್ರಿಯಾಗಿ ನನ್ನ ಪಾಲಿಗೆ ಇದೊಂದು ಸೌಭಾಗ್ಯ. ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನ. ಈ ಸುವರ್ಣ ಸೌಧ ಐಕ್ಯತೆಯ ಪ್ರತೀಕ ಎಂದು ಶೆಟ್ಟರ್ ಹೇಳಿದರು.
ಸುವರ್ಣಸೌಧ ಉದ್ಘಾಟನೆಗೆ ಆಗಮಿಸಿ, ನಾಡಿನ ಬಗ್ಗೆ ಹೆಮ್ಮೆಯ ಮಾತಗಳನ್ನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮುಖ್ಯಮಂತ್ರಿ ಅವರು ಧನ್ಯವಾದ ಅರ್ಪಿಸಿದರು.
ರಾಷ್ಟ್ರಗೀತೆ ಹಾಗೂ ನಾಡಗೀತೆಯೊಂದಿಗೆ ಈ ಸಂಭ್ರಮದ ಕಾರ್ಯಕ್ರಮ ಆರಂಭಗೊಂಡಿತು. ವಿಧಾನಸಭೆ ಸ್ಪೀಕರ್ ಕೆಜೆ ಬೋಪಯ್ಯ ಅವರು ಸ್ವಾಗತ ಭಾಷಣ ಮಾಡಿದರು.
ಬೆಳಗಾವಿ ಐತಿಹಾಸಿಕ ನಗರಿ, ಕನ್ನಡ ಸಂಸ್ಕೃತಿಗೆ ಬೆಳಗಾವಿ ಕೊಡುಗೆ ಅಪಾರ, ಕರ್ನಾಟಕದ ಎಲ್ಲಾ ಧರ್ಮಗಳ ನೆಲೆವೀಡು, ಸಾಹಿತ್ಯ ಸಂಸ್ಕೃತಿಯ ತವರು ಎಂದು ಬೋಪಯ್ಯ ಹೇಳಿದರು. ವಿಧಾನ ಪರಿಷತ್ ಸಭಾಪತಿ ಶಂಕರಮೂರ್ತಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.
ರಾಜ್ಯಪಾಲ ಎಚ್ ಆರ್ ಭಾರಧ್ವಾಜ್, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆಎಚ್ ಮುನಿಯಪ್ಪ, ಉಪ ಮುಖ್ಯಮಂತ್ರಿ ಆರ್ ಅಶೋಕ್, ಕೆಎಸ್ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ, ಎನ್ ಧರಂಸಿಂಗ್ ಹಾಗೂ ಡಿವಿ ಸದಾನಂದ ಗೌಡ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದಾರೆ.
ನಂತರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಧಿವೇಶನಕ್ಕೆ ಚಾಲನೆ ನೀಡಿ ಭಾಷಣ ಮಾಡಿದರು. ಇದು ಗಾಂಧಿ ಭೇಟಿ ಮಾಡಿದ ಸ್ಥಳ, ಬ್ರಿಟಿಷರ ವಿರುದ್ಧ ಹೋರಾಡಿದ ಧೀರಮಹಿಳೆ ರಾಣಿ ಚೆನ್ನಮ್ಮ ಅವರು ಸ್ಥಳ. ಇಲ್ಲಿಗೆ ಭೇಟಿ ನೀಡಿರುವುದು ನನಗೆ ಹೆಮ್ಮೆ ತಂದಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹೇಳಿದ್ದಾರೆ.
ಲಾಠಿ ಚಾರ್ಜ್ : ಸುವರ್ಣ ವಿಧಾನಸೌಧ ಉದ್ಘಾಟನೆ ಸಂದರ್ಭದಲ್ಲಿ ನೆರೆದಿದ್ದ ಜನರು ವೇದಿಕೆ ಮುಂಭಾಗಕ್ಕೆ ನುಗ್ಗಲು ಯತ್ನಿಸಿದ 30-40 ಜನರನ್ನು ಪೊಲೀಸರು ತಡೆ ಹಿಡಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದಿದ್ದಲ್ಲದೆ ಲಘು ಲಾಠಿ ಪ್ರಹಾರವೂ ಜರುಗಿತು.












Click it and Unblock the Notifications