ಬೆಂಗಳೂರು - ಕಾರವಾರ ರಾತ್ರಿ ರೈಲು ನ1ರಿಂದ ಆರಂಭ

ಬೆಂಗಳೂರಿನಿಂದ ಕಣ್ಣೂರಿಗೆ ಸಾಗುವ ರೈಲನ್ನು ಮಂಗಳೂರಿನಲ್ಲಿ ಪ್ರತ್ಯೇಕಿಸಿ ಉಡುಪಿ, ಕುಂದಾಪುರ, ಭಟ್ಕಳ ಮಾರ್ಗವಾಗಿ ಕಾರವಾರಕ್ಕೆ ನವೆಂಬರ್ ಒಂದರಿಂದ ರಾತ್ರಿ ರೈಲು ಬಿಡಲು ಹೈಕೋರ್ಟ್ ರೈಲ್ವೆ ಮಂಡಳಿಗೆ ಆದೇಶ ನೀಡಿದೆ.
ಕಾರವಾರಕ್ಕೆ ರಾತ್ರಿ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಶಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿ ಜೆ ಸೇನ್ ಮತ್ತು ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ರೈಲ್ವೆ ಮಂಡಳಿ ಪರ ವಕೀಲರು ಕಾರವಾರಕ್ಕೆ ರಾತ್ರಿ ರೈಲು ವ್ಯವಸ್ಥೆ ಕಲ್ಪಿಸಲು ಒಂದೂವರೆ ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎನ್ನುವ ವಾದ ಮಂಡಿಸಿದರು.
ರೈಲ್ವೆ ಮಂಡಳಿಯ ನಿರ್ಧಾರವನ್ನು ಸ್ವಾಗತಿಸಿದ ಕೋರ್ಟ್ ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ ಒಂದರಿಂದ ಸಂಚಾರ ವ್ಯವಸ್ಥೆ ಶುರು ಮಾಡಲು ಆದೇಶ ನೀಡಿತು.
ಅಲ್ಲದೆ 17 ಬೋಗಿ ಇರುವುದನ್ನು 24 ಬೋಗಿ ಮಾಡುತ್ತೀರಿ ಎನ್ನುವ ನಂಬಿಕೆಯಿದೆ, ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ ಎನ್ನುವ ಪೀಠದ ಪ್ರಶ್ನೆಗೆ ರೈಲ್ವೆ ಮಂಡಳಿ ಪರ ವಕೀಲರು ಉತ್ತರಿಸುತ್ತಾ ಹಾಸನದಿಂದ ಸುಬ್ರಮಣ್ಯದವರೆಗೆ ರೈಲು ಮಾರ್ಗ ಸೂಕ್ಷ್ಮ ಪ್ರದೇಶದಲ್ಲಿದ್ದು ರೈಲು ಬೋಗಿ ಹೆಚ್ಚಿಸಲು ಕಷ್ಟವೆಂದು ವಾದ ಮಂಡಿಸಿದರು.
ರೈಲ್ವೆ ಮಂಡಳಿ ವಾದವನ್ನು ಒಪ್ಪದ ಪೀಠ 50ಕ್ಕೂ ಹೆಚ್ಚು ಬೋಗಿ ಇರುವ ಗೂಡ್ಸ್ ರೈಲು ಈ ಮಾರ್ಗದಲ್ಲಿ ಸಂಚರಿಸುತ್ತಿರಬೇಕಾದರೆ ಪ್ಯಾಸೆಂಜರ್ ರೈಲು ಯಾಕೆ ಸಾಧ್ಯವಿಲ್ಲ ಎಂದು ರೈಲ್ವೆ ವಕೀಲರನ್ನು ಮರು ಪ್ರಶ್ತ್ನಿಸಿ ವಿಚಾರಣೆಯನ್ನು ಮುಂದೂಡಿತು.
ಯಶವಂತಪುರ, ಕಣ್ಣೂರು ರಾತ್ರಿ ರೈಲನ್ನು ( ಟ್ರೈನ್ ಸಂಖ್ಯೆ 16517 /16518 ) ಕಾರವಾರಕ್ಕೆ ವಿಸ್ತರಿಸಿ ಕೋರ್ಟ್ ನೀಡಿದ ಆದೇಶಕ್ಕೆ ಕರಾವಳಿ ಜನತೆ ಸಂತಸ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications