ಕಾವೇರಿ ನೀರಿಗಾಗಿ ಯಡಿಯೂರಪ್ಪ ಪಾದಯಾತ್ರೆ

ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರೊಂದಿಗೆ ನಗರದ ಆನಂದ ರಾವ್ ಸರ್ಕಲ್ ಫ್ಲೈ ಓವರ್ ಮೌರ್ಯ ವೃತ್ತದ ಬಳಿ ಶುಕ್ರವಾರ ಧರಣಿ ಸತ್ಯಾಗ್ರಹ ಕುಳಿತುಕೊಂಡು ಬೆಂಬಲ ಸೂಚಿಸಿದ್ದಾರೆ.
ಈ ನಡುವೆ ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ನಿರಶನ ಹೂಡಿರುವ ಕಾವೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಾದೇಗೌಡರ ಅನುಮತಿಯನ್ನು ಯಡಿಯೂರಪ್ಪ ಬೇಡಿದ್ದಾರೆ.
ಪಾದಯಾತ್ರೆ ಸಂಬಂಧ ಅಭಿಪ್ರಾಯ ಸಂಗ್ರಹಣೆ ನಡೆದಿದೆ. ಮಾದೇಗೌಡರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಮಾದೇಗೌಡರು ಅನುಮತಿ ನೀಡಿದರೆ ಬೆಂಗಳೂರಿನಿಂದ ಕೃಷ್ಣರಾಜಸಾಗರ ಅಣೆಕಟ್ಟುವರೆಗೆ ಪಾದಯಾತ್ರೆ ನಡೆಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಯಡಿಯೂರಪ್ಪನವರು ಇಂದು ಬೆಳಗ್ಗೆ 11 ಗಂಟೆಗೆ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಯಡಿಯೂರಪ್ಪ, ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಕಾವೇರಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಅಕ್ಟೋಬರ್ 5 ರಿಂದ ಅರಂಭಿಸಬೇಕಿದ್ದ ಬರ ಅಧ್ಯಯನ ಪ್ರವಾಸವನ್ನು ಯಡಿಯೂರಪ್ಪ ಅವರು ರದ್ದುಗೊಳಿಸಿದ್ದಾರೆ.
ಸಿದ್ದು ಮೇಲೆ ಗುಡುಗಿದ ಬಿಎಸ್ ವೈ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮೈಸೂರು, ಮಂಡ್ಯದಲ್ಲಿ ಕಾವೇರಿ ಹೋರಾಟಕ್ಕೆ ಬೆಂಬಲ ನೀಡುವಂತೆ ಓಡಾಡಿಕೊಂಡಿದ್ದಾರೆ. ಮಾದೇಗೌಡರ ಬಳಿ ನಿಂತು ಹೋರಾಟಕ್ಕೆ ಬೆಂಬಲ ಸೂಚಿಸುವ ಬದಲು ದೆಹಲಿಗೆ ಹೋಗಬೇಕಿತ್ತು.
ಜಗದೀಶ್ ಶೆಟ್ಟರ್ ಅವರು ಪ್ರಧಾನಿ ಅವರೊಂದಿಗೆ ಚರ್ಚಿಸಲು ಹೋದಾಗ ದೆಹಲಿಯಲ್ಲಿದ್ದರೂ ಸಿದ್ದರಾಮಯ್ಯ ಏಕೆ ರಾಜ್ಯ ನಿಯೋಗದ ಜೊತೆ ಸೇರಲಿಲ್ಲ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದ್ದರೂ ದನಿ ಎತ್ತುತ್ತಿಲ್ಲ ಏಕೆ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ರಾಜೀನಾಮೆಗೂ ಸಿದ್ದ: ಕಾವೇರಿ ವಿವಾದ ಸೂಕ್ಷ್ಮ ವಿಚಾರವಾಗಿದ್ದು,ಈಗ ಕಾನೂನಿನ ಮೂಲಕ ಮಾತ್ರ ಪರಿಹಾರ ಸಾಧ್ಯ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಗೆ ಹಲವಾರು ಸಂಘಟನೆ ಮುಖಂಡರು ಒತ್ತಾಯಿಸುತ್ತಿದ್ದಾರೆ. ಅದರೆ, ರಾಜೀನಾಮೆ ಇದಕ್ಕೆ ಪರಿಹಾರವಲ್ಲ. ರಾಜೀನಾಮೆಯಿಂದ ಪರಿಹಾರ ಸಿಗುವುದಾದರೆ ಎಲ್ಲರೂ ರಾಜೀನಾಮೆ ನೀಡಲು ಸಿದ್ಧ ಎಂದು ಯಡಿಯೂರಪ್ಪ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications