'ಮುಂದೇನು ಮಾಡುತ್ತೇವೆಂದು ಬಾಯಲ್ಲಿ ಹೇಳಲ್ಲ!'
ಬೆಂಗಳೂರು, ಅ. 8 : ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿರುವುದು ಕರ್ನಾಟಕದ ಪ್ರತಿಕೂಲವಾಗಿ ಪರಿಣಮಿಸಿದೆ. ಈ ಕ್ಷಣದಿಂದಲೇ ಕಾವೇರಿ ಹೋರಾಟ ಇನ್ನೂ ತೀವ್ರಗೊಳ್ಳುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಮೆರವಣಿಗೆ ಮಾಡಿದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಟಿಎ ನಾರಾಯಣ ಗೌಡ ಅವರು ಮುಂದೇನು ಮುಡುತ್ತೇವೆಂದು ಬಾಯಿಬಿಟ್ಟು ಹೇಳಲ್ಲ, ಮಾಡಿ ತೋರಿಸುತ್ತೇವೆ ಎಂದು ಗುಡುಗಿದ್ದರು. ಆ ಮಾತನ್ನು ಗೌಡರು ಉಳಿಸಿಕೊಳ್ಳುವರೆ?
***
ಬೆಂಗಳೂರಿಗೆ ಬೆಂಗಳೂರು ಕಡೆಗೂ ಎಚ್ಚೆತ್ತು ನಿಂತಿದೆ. ಕಾವೇರಿ ನೀರಿಗಾಗಿ ಮತ್ತು ಮಂಡ್ಯಪರ ರೈತರಿಗಾಗಿ ಹೋರಾಟಕ್ಕೆ ಧುಮುಕಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ನೀಡಿದ ಕರೆಗೆ ಬೆಂಗಳೂರಿನ ಜನತೆ ಜೈ ಎಂದಿದ್ದಾರೆ. ಕಾವೇರಿ ನೀರು ಕುಡಿಯುತ್ತಿರುವ ಬೆಂಗಳೂರಿಗರು ಹೋರಾಟಕ್ಕೆ ಹಿಂದೆ ಬೀಳುವುದಿಲ್ಲ ಎಂದು ತೋರಿದ್ದಾರೆ.
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ, ಎಲ್ಲ ಕರವೇ ಕಾರ್ಯಕರ್ತರು, 'ನಮ್ಮ ಕಣಕಣದಲ್ಲೂ ಕಾವೇರಿ ಹರಿಯುತ್ತಿದ್ದಾಳೆ' ಎಂದ ಬೆಂಗಳೂರಿನ ಜನರು, ಕಾಲೇಜು ವಿದ್ಯಾರ್ಥಿಗಳು, ಐಟಿಬಿಟಿ ಉದ್ಯೋಗಿಗಳು, ಬೆರಳೆಣಿಕೆಯ ಚಿತ್ರನಟರು ಬರುವ ಮುನ್ನವೇ ಅಚ್ಚಬಿಳಿ ದಿರಿಸಿನಲ್ಲಿ ಆಗಮಿಸಿದ್ದ ನಾರಾಯಣ ಗೌಡರು, ನಮ್ಮ ಬೇಡಿಕೆಗೆ ಕೇಂದ್ರ ಮಣಿಯದಿದ್ದರೆ 1991ರಲ್ಲಿ ಉದ್ಭವಿಸಿದ್ದ ಪರಿಸ್ಥಿತಿಯನ್ನು ಮತ್ತೆ ಎದುರಿಸಬೇಕಾಗುತ್ತದೆ ಎಂದು, ಒನ್ಇಂಡಿಯಾ-ಕನ್ನಡದೊಡನೆ ಮಾತನಾಡುತ್ತ ಎಚ್ಚರಿಸಿದ್ದಾರೆ.
ಕರ್ನಾಟಕ ಧಗಧಗಿಸುತ್ತಿರುವಾಗ ಕರ್ನಾಟಕದ ಸನ್ಮಾನ್ಯ ರಾಜ್ಯಪಾಲರು ಅರಮನೆಯಂಥ ಮನೆಯಲ್ಲಿ ಎಸಿ ರೂಮಿನಲ್ಲಿ ತಣ್ಣಗೆ ಕುಳಿತಿದ್ದಾರೆ. ಈಗಾಗಲೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕನ್ನಡಿಗರಿಗೆ ಅನ್ಯಾಯ, ಮೋಸ ಮಾಡಿದ್ದಾರೆ. ರಾಜ್ಯಪಾಲರು ಮಾತ್ರ ಈ ಎಲ್ಲ ಅನ್ಯಾಯವನ್ನು ನೋಡುತ್ತ ಸುಮ್ಮನೆ ಕುಳಿತಿಲ್ಲ. ರಾಜ್ಯದ ರಾಜ್ಯಪಾಲರಾಗಿ ಅವರಿಗೆ ಕನ್ನಡಿಗರ ಬಗ್ಗೆ ಕಳಕಳಿ ಇಲ್ಲವೆ? ಎಂದು ಪ್ರಶ್ನಿಸಿದ ಗೌಡರು, ಅವರು ಕಾವೇರಿ ನೀರು ಹರಿಯುವುದನ್ನು ನಿಲ್ಲಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಾರೆ ಎಂಬ ನಂಬಿಕೆಯಿದೆ ಎಂದರು. [ಕರವೇ ಮೆರವಣಿಗೆಯ ಚಿತ್ರಗಳು]

ಮುಂದಿನ ಘಟನೆಗಳಿಗೆ ನಾವು ಜವಾಬ್ದಾರರಲ್ಲ!
ತಮಿಳುನಾಡಿಗೆ ಕಾವೇರಿ ನೀರನ್ನು ಕನ್ನಡಿಗರ ಹಿತಾಸಕ್ತಿಯನ್ನು ಧಿಕ್ಕರಿಸಿ ಹರಿಸಿದ್ದಕ್ಕಾಗಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸರಕಾರವಿದ್ದಾಗ ಕರ್ನಾಟಕಕ್ಕೆ ಕರ್ನಾಟಕವೇ ಹೊತ್ತಿ ಉರಿದಿತ್ತು. ಅಂಥ ಸ್ಥಿತಿ ಮತ್ತೆ ಬರದಂತೆ ತಡೆಯುವ ಜವಾಬ್ದಾರಿ ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಕಾವೇರಿ ನೀರಿ ಪ್ರಾಧಿಕಾರದ ಮೇಲಿದೆ. ತಕ್ಷಣ ಕಾವೇರಿ ನಿಲ್ಲಿಸಲಿದ್ದರೆ ಮುಂದೆ ಏನಾಗುತ್ತದೆ ಎಂಬುದನ್ನು ಬಾಯಿ ಮಾತಿಂದ ಹೇಳುವುದಿಲ್ಲ, ಮಾಡಿ ತೋರಿಸುತ್ತೇವೆ ಎಂದು ನಾರಾಯಣ ಗೌಡ ಗುಡುಗಿದ್ದಾರೆ.

ಪ್ರವಾಹೋಪಾದಿಯಲ್ಲಿ ಹರಿದುಬಂದ ಜನಸಾಗರ
ಬೆಳಗಿನ ಹನ್ನೊಂದು ಗಂಟೆಯ ಹೊತ್ತಿನವರೆಗೆ 'ಇಷ್ಟೇನಾ ಜನ ಮೆರವಣಿಗೆಗೆ ಬಂದಿರೋದು' ಎನ್ನುವಂತಿದ್ದ ಬಸವನಗುಡಿ ಮೈದಾನಕ್ಕೆ ಹನ್ನೊಂದು ಗಂಟೆಯ ಹೊತ್ತಿಗೆ ಪ್ರವಾಹೋಪಾದಿಯಲ್ಲಿ ಜನರು ಪುಟ್ಟ ಪುಟ್ಟ ಮೆರವಣಿಗೆಯ ಮುಖಾಂತರ ಹರಿದು ಬಂದಿತು. ಆಟೋ, ವ್ಯಾನುಗಳ ಮುಖಾಂತರ, ಕಾಲ್ನಡಿಗೆಯಲ್ಲಿ ಬರುತ್ತಿದ್ದ ಹೋರಾಟಗಾರರು ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಕೇಂದ್ರ ವಿರೋಧಿ ಘೋಷಣೆಗಳನ್ನು ಕೂಗುತ್ತ ಬರುತ್ತಿದ್ದರು.

ಎಲ್ಲಿ ಕಾಲೇಜು ವಿದ್ಯಾರ್ಥಿಗಳು?
ಮೈದಾನದ ಪಕ್ಕದಲ್ಲೇ ಇರುವ ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳು, ಇಲ್ಲಿ ಏನೋ ತಮಾಷೆ ನಡೆಯುತ್ತಿದೆ ಎಂದು ಬಿಡುವಿದ್ದಾಗ ನೋಡಿಕೊಂಡು ಹೋಗುತ್ತಿದ್ದುದನ್ನು ಬಿಟ್ಟರೆ ಇತರೆ ಕಾಲೇಜು ವಿದ್ಯಾರ್ಥಿಗಳು ಅಲ್ಲಿ ಜಮಾಯಿಸಿರಲಿಲ್ಲ. ಇಂತಹ ಹೋರಾಟಕ್ಕೆ ವಿದ್ಯಾರ್ಥಿಗಳು ಬರದಿದ್ದರೆ ಅವರನ್ನೆಲ್ಲ ಹೇಗೆ ಹೋರಾಟಕ್ಕೆ ಎಳೆತರಬೇಕು ಎಂಬುದು ನಮಗೆ ಗೊತ್ತಿದೆ ಎಂದು ನಾರಾಯಣ ಗೌಡರು ಎಚ್ಚರಿಕೆ ನೀಡಿದ್ದಾರೆ.

ಬೀದಿಬೀದಿಗಳಲ್ಲಿ ಕಾವೇರಿಗಾಗಿ ಎದ್ದ ಕೂಗು
ಬೆಂಗಳೂರು ನಗರದ ಅನೇಕ ಬಡಾವಣೆಗಳಲ್ಲಿ ಬೆಳಗಿನಿಂದಲೇ ಜಾಥಾಗಳು ಹೊರಟಿದ್ದವು. ಹನುಮಂತನಗರ, ಕೆಂಗೇರಿ, ಹೊಸಕೆರೆಹಳ್ಳಿ ಮುಂತಾದ ನಗರಗಳಲ್ಲಿ ತಮ್ಮಟೆ ಬಾರಿಸುತ್ತ ಗಂಡಸರು, ಖಾಲಿ ಕೊಡಗಳನ್ನು ಹಿಡಿದುಕೊಂಡಿದ್ದ ಹೆಣ್ಣುಮಕ್ಕಳು ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸಣ್ಣಸಣ್ಣ ಮೆರವಣಿಗೆ ನಡೆಯುತ್ತಿದ್ದ ಗಲ್ಲಿಗಳಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸುವುದು ಪೊಲೀಸರಿಗೆ ಬಲು ಸವಾಲಿನ ಕೆಲಸವಾಗಿತ್ತು.

ಬೆಂಗಳೂರಿನ ಮಹಿಳೆಯರಿಗೇನಾಗಿದೆ?
ಬಸವನಗುಡಿ ಮೈದಾನದಲ್ಲಿ ಎಲ್ಲೆಂದಲ್ಲಿ ಬರೀ ಪುರುಷರೇ. ಆರೇ ಆರು ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾಮಣಿಗಳನ್ನು ಬಿಟ್ಟರೆ ಎಲ್ಲೂ ಮಹಿಳೆಯರ ಸುಳಿವೇ ಇಲ್ಲ. ಮೈದಾನದಲ್ಲಿದ್ದ ಮಹಿಳೆಯರು ಕೂಡ ಸ್ವಾಗತ ಹಾಡು ಹಾಡಲು ಬಂದವರೆ. ಬೆಂಗಳೂರಿನ ಮಹಿಳೆಯರಿಗೆ ಏನಾಗಿದೆ?

ಪ್ರತಿಭಟನೆಗಿಳಿದ ಬೆಂಗಳೂರಿನ ವಿಪ್ರ ವೃಂದ
ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟು ಕೆಲ ನಾಯಕರು ಇಲ್ಲಿ ಜಾತಿಯ ಲೆಕ್ಕಾಚಾರ ಹಾಕುತ್ತಿದ್ದರೆ, ನದಿಗೆ ನದಿ ಸೇರಿದಂತಿದ್ದ ಜನರ ಮೆರವಣಿಗೆಯಲ್ಲಿ ಜಾತಿಯ ಹಂಗಿರಲಿಲ್ಲ. ಎಲ್ಲರೂ ಕುಡಿಯುವುದು ಕಾವೇರಿ ನೀರೇ. ಬೆಂಗಳೂರಿನ ವಿಪ್ರ ವೃಂದ ಕೂಡ ನಾವೂ ನಿಮ್ಮೊಂದಿಗಿದ್ದೇವೆ ಎಂದು ಮೆರವಣಿಗೆಯನ್ನು ಸೇರಿಕೊಂಡಿದ್ದರು.

ಎಲ್ಲಿ ಬೆಂಗಳೂರಿನ ಐಟಿ ಉದ್ಯೋಗಿಗಳು?
ಜನಸ್ತೋಮವನ್ನು ಗಮನಿಸಿದರೆ ಮೆರವಣಿಗೆಯಲ್ಲಿ ಐಟಿ ಬಿಟಿ ಉದ್ಯೋಗಿಗಳ ಸಂಖ್ಯೆ ಕೂಡ ಬೆರಳೆಣಿಕೆಯಷ್ಟು. ಅಣ್ಣಾ ಹಜಾರೆಗಾಗಿ ಬೀದಿಬೀದಿಗಳಿದಿದ್ದ ಕನ್ನಡಿಗ, ಕನ್ನಡೇತರ ಐಟಿ ಉದ್ಯೋಗಿಗಳು ಯಾಕೆ ಕಾವೇರಿ ಹೋರಾಟಕ್ಕೆ ಬೃಹತ್ ಪ್ರಮಾಣದಲ್ಲಿ ತೊಡಗಿಕೊಂಡಿಲ್ಲ ಎಂಬ ಪ್ರಶ್ನೆ ಏಳುವುದು ಸಹಜ.












Click it and Unblock the Notifications