ಜಾತಿ 'ಪ್ರೇಮ'ಕ್ಕೆ ಮೂರು ಬಲಿ, ಬೆಚ್ಚಿದ ಚಿಕ್ಕಮಗಳೂರು

ಚಿಕ್ಕಮಗಳೂರು, ಅ.5: ಇಲ್ಲಿನ ಮಲ್ಲಂದೂರು ಠಾಣಾ ವ್ಯಾಪ್ತಿಯಲ್ಲಿರುವ ಅವರೆ ಗ್ರಾಮದಲ್ಲಿ ಗುರುವಾರ ನಡೆದ ಭೀಕರ ಕೊಲೆ ಕಂಡು ಇಡೀ ಗ್ರಾಮ ಬೆಚ್ಚಿಬಿದ್ದಿತ್ತು. ಕೆಳ ಜಾತಿ ಹುಡುಗನನ್ನು ಮೇಲ್ಜಾತಿ ಹುಡುಗಿ ಪ್ರೀತಿಸಿದ್ದೇ ತಪ್ಪಾಯ್ತು. ಮರ್ಯಾದೆ ಉಳಿಸಿಕೊಳ್ಳಲು ಹುಡುಗನ ತಂದೆ, ಚಿಕ್ಕಮನ ಕೊಂದ ಹುಡುಗಿಯ ಮಾವ ನಂತರ ಯುವಕನ ಕಡೆಯವರಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾನೆ.

ತನ್ನ ಸಹೋದರಿಯ ಮಗಳನ್ನು ತಮಗಿಂತ ಕೆಳ ಜಾತಿಯ ಯುವಕ ಪ್ರೀತಿಸಿದ್ದನೆಂಬ ಕಾರಣಕ್ಕೆ ಯುವತಿಯ ಮಾವ ಅಜ್ಜೇಗೌಡ ಎಂಬಾತ ಸಂಬಂಧಿಗಳಾದ ಇಬ್ಬರು ಅಮಾಯಕರನ್ನು ಗುಂಡಿಕ್ಕಿ ಬರ್ಬರ ಹತ್ಯೆ ನಡೆಸಿರುವ ಘಟನೆಗೆ ಪ್ರತಿಯಾಗಿ ಯುವಕನ ಕಡೆಯವರು ಅಜ್ಜೇಗೌಡನನ್ನು ಸುತ್ತಿಗೆಯಿಂದ ಜಜ್ಜಿ ಕೊಲೆ ಮಾಡಿದ್ದಾರೆ.

ಕೊಲೆಗೀಡಾದವರನ್ನು ಅವರೆ ಗ್ರಾಮದ ನಿವಾಸಿಗಳಾದ ರಾಮ ಶೆಟ್ಟಿ (52) ಸುಧಾ(38) ಮತ್ತು ಅಜ್ಜೇಗೌಡ ಎಂದು ಗುರುತಿಸಲಾಗಿದೆ.

ಅಂತರ್ಜಾತಿ ಪ್ರೇಮ ಮುಳುವಾಯ್ತು: ಚಿಕ್ಕಮಗಳೂರು ತಾಲೂಕಿನ ಬೈಗೂರಿನ ಲೋಹಿತ್ ಎಂಬ ಯುವಕ ಕೆರೆಮಕ್ಕಿ ಸಮೀಪದ ಕಸಗೆ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇದಕ್ಕೆ ಯುವತಿ ಮನೆಯವರ ವಿರೋಧವಿತ್ತು.

ಈ ಸಂಗತಿ ಮನೆ ಮಂದಿಗೆ ತಿಳಿದ ಬೆನ್ನಲ್ಲೇ ನಿನ್ನೆ ಅಜ್ಜೇಗೌಡ ಹಾಗೂ ಆತನ ಸಂಬಂಧಿಗಳಾದ ನವೀನ್, ಪ್ರದೀಪ್, ರಾಮೇಗೌಡ ಎಂಬುವರು ಲೋಹಿತ್‌ನನ್ನು ಗೃಹ ಬಂಧನದಲ್ಲಿಟ್ಟು ಮನಸೋಇಚ್ಛೆ ಚೆಚ್ಚಿದ್ದಾರೆ.

ಈ ಸಂದರ್ಭ ಲೋಹಿತ್ ತಪ್ಪಿಸಿಕೊಂಡು ಬೈಗೂರಿನಲ್ಲಿದ್ದ ತನ್ನ ಮನೆಗೆ ಓಡಿ ಬಚ್ಚಿಟ್ಟುಕೊಂಡಿದ್ದ. ಅಜ್ಜೇಗೌಡ ಅಲ್ಲಿಗೆ ಬಂದೂಕು ಸಮೇತ ಬಂದಾಗ ಲೋಹಿತ್ ಅಲ್ಲಿಂದ ಪರಾರಿಯಾಗಿದ್ದಾನೆ. ಲೋಹಿತ್‌ನ ತಂದೆ ರಾಮ ಶೆಟ್ಟಿ ಹೆದರಿಕೊಂಡು ಅವರೆ ಗ್ರಾಮದಲ್ಲಿದ್ದ ಸಹೋದರ ಮೊಗಣ್ಣ ಶೆಟ್ಟಿ ಎಂಬವರ ಮನೆಗೆ ಬಂದಿದ್ದಾರೆ.

ಈ ಸಂದರ್ಭ ಅಲ್ಲಿಗೂ ಬಂದ ಅಜ್ಜೇಗೌಡ ಮನೆಯಲ್ಲಿದ್ದ ರಾಮ ಶೆಟ್ಟಿ ಹಾಗೂ ಅವರ ನಾದಿನಿ ಸುಧಾ ಎಂಬವರನ್ನು ಗುಂಡು ಹಾರಿಸಿ ಸಾಯಿಸಿದ್ದಾನೆ.

ಈ ಘಟನೆಯಿಂದ ಕುಪಿತರಾದ ರಾಮ ಶೆಟ್ಟಿಯ ಸಹೋದರ ಮೊಗಣ್ಣ ಶೆಟ್ಟಿ, ತಮ್ಮಣ್ಣ ಶೆಟ್ಟಿ, ಸಣ್ಣಯ್ಯ ಶೆಟ್ಟಿ ಎಂಬವರು ಅಜ್ಜೇಗೌಡನನ್ನು ಹಿಡಿದುಕೊಂಡು ಮನ ಬಂದಂತೆ ಥಳಿಸಿದ್ದಾರೆ.

ಈ ಸಮಯ ಕಾಡಿನಲ್ಲಿ ಅವಿತಿದ್ದ ಲೋಹಿತ್ ವಿಷಯ ತಿಳಿದು ಸ್ಥಳಕ್ಕೆ ಬಂದವನೇ ಸುತ್ತಿಗೆಯಿಂದ ಅಜ್ಜೇಗೌಡನ ತಲೆಗೆ ಹೊಡೆದಿದ್ದಾನೆ. ಇದರಿಂದಾಗಿ ಅಜ್ಜೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕುಂಬಾರ ಶೆಟ್ಟಿ ಜನಾಂಗದ ಲೋಹಿತ್ ಹಾಗೂ ಅಜ್ಜೇಗೌಡರ ಕಡೆಯ ಗೌಡರ ಜನಾಂಗದ ಯುವತಿ ಕಳೆದ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಕುಂಬಾರ ಜಾತಿಗೆ ಸೇರಿದ್ದ ಲೋಹಿತ್‌ನೊಂದಿಗಿನ ಸಂಬಂಧ ಅಜ್ಜೇಗೌಡ ಹಾಗೂ ಸಂಬಂಧಕರಿಗೆ ಇಷ್ಟವಿರಲಿಲ್ಲ.

ಈ ಹಿನ್ನೆಲೆಯಲ್ಲಿ ಅನೇಕ ಬಾರಿ ಲೋಹಿತನಿಗೆ ಎಚ್ಚರಿಸಿದ್ದರು. ಈತ ಪ್ರತಿ ದಿನವೂ ಯುವತಿಗೆ ಮೊಬೈಲ್ ಮೂಲಕ ಎಸ್‌ಎಂಎಸ್ ಮತ್ತು ಕರೆ ಮಾಡಿ ಬೆಂಬಿಡದ ಭೂತದಂತೆ ಪೀಡಿಸುತ್ತಿದ್ದ. ಅಲ್ಲದೇ ಯುವತಿಯ ಅಶ್ಲೀಲ ಚಿತ್ರ ಕೂಡ ತೆಗೆದಿದ್ದ ಎನ್ನಲಾಗಿದೆ.

ಈ ಕಾರಣಕ್ಕೆ ಬರ್ಬರ ಹತ್ಯೆಗಳ ನಡೆದಿವೆ ಎನ್ನುವ ಶಂಕೆಗಳು ಗ್ರಾಮದ ತುಂಬಾ ಹರಿದಾಡುತ್ತಿವೆ. ಆದರೆ ಘಟನೆಯಲ್ಲಿ ಅಮಾಯಕರಿಬ್ಬರು ವಿನಾಕಾರಣ ಬಲಿಯಾಗಿರುವುದು ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಂದೂರು ಪೊಲೀಸರು ಎರಡು ಕಡೆಯರು ನೀಡಿರುವ ಪ್ರತ್ಯೇಕ ದೂರುಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳಾದ ಲೋಹಿತ್, ತಮ್ಮಣ್ಣ ಶೆಟ್ಟಿ, ಸಣ್ಣಯ್ಯ ಶೆಟ್ಟಿ ಮತ್ತು ಮೊಗಣ್ಣಶೆಟ್ಟಿಯನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+