ಬಿಜೆಪಿ ಹಿರಿತಲೆಗಳ ಮೇಲೆ ಎಚ್ಡಿಕೆ ಸಿಡಿಸಿದ ಆಟಂಬಾಂಬ್

ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗ ಕೇಂದ್ರದ ನಾಯಕರು ಯಾರೂ ಇರಲಿಲ್ಲ. ನಾವು ನಾವೇ ಮಾತುಕತೆ ನಡೆಸಿ ಅಧಿಕಾರ ಹಂಚಿಕೆ ಪ್ರಕಾರ ಸರಕಾರ ನಡೆಸಿಕೊಂಡು ಹೋದೆವು. ನಮ್ಮ ಅವಧಿ ಮುಗಿದು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸುವ ಸಮಯದಲ್ಲಿ ಬಿಜೆಪಿ ಕೇಂದ್ರ ನಾಯಕರು ಮಧ್ಯಪ್ರವೇಶಿಸಿದರು.
ಯಶವಂತ್ ಸಿನ್ಹಾ, ವೆಂಕಯ್ಯ ನಾಯ್ಡು ಮತ್ತು ಅನಂತಕುಮಾರ್ ಸ್ಟಾಂಪ್ ಪೇಪರ್ ನಲ್ಲಿ ಷರತ್ತು ಮುದ್ರಿಸಿ ಯಡಿಯೂರಪ್ಪ ಅವರಿಗೆ ಅಧಿಕಾರ ಸಿಗದಂತೆ ಮಾಡಿದರು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಶ್ರೀರಾಮುಲು ಅವರ ಬಿಎಸ್ಆರ್ ಪಕ್ಷದಿಂದಾಗಲಿ ಅಥವಾ ಯಡಿಯೂರಪ್ಪನವರ ಹೊಸ ಪಕ್ಷದಿಂದಾಗಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ತೃಣಮಾತ್ರದ ತೊಂದರೆಯೇನೂ ಇಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಭವಿಷ್ಯ ನುಡಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂವಾದದಲ್ಲಿ ಕುಮಾರಸ್ವಾಮಿ ಆಡಿದ ಕೆಲವೊಂದು ಆಯ್ದ ಹೇಳಿಕೆಗಳು:
* ಹತ್ತು ಹೊಸ ಪಕ್ಷ ಹುಟ್ಟಿದರೂ ನಮಗೆ ಭಯ, ಆತಂಕವಿಲ್ಲ.
* ಜಾತಿ, ಹಣ, ಹೆಂಡ ಈ ಬಾರಿಯ ಚುನಾವಣೆಯಲ್ಲಿ ವರ್ಕ್ ಔಟ್ ಆಗುವುದಿಲ್ಲ.
* ಮಠಾಧೀಶರ ಪ್ರಭಾವ ನಡೆಯುವುದೇ ಇಲ್ಲ.
* ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಯಾವುದೇ ಸಾಧ್ಯತೆಗಳಿಲ್ಲ.
* ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಹಿತ ಕಾಪಾಡಲು ಸಾಧ್ಯವಿಲ್ಲ, ಕಾವೇರಿ ಸಮಸ್ಯೆಯೇ ಇದಕ್ಕೆ ಕೊಡಬಹುದಾದ ಉದಾಹರಣೆ.
* ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸ ನಮಗಿದೆ.
* ನಮ್ಮದು ಪ್ರಾದೇಶಿಕ ಪಕ್ಷ, ಮತದಾರರು ನಮಗೆ ಆಶೀರ್ವಾದ ಮಾಡಲಿದ್ದಾರೆ.
* ಈಗಿನ ಬಿಜೆಪಿ ಸರಕಾರದ ಭವಿಷ್ಯ ಯಡಿಯೂರಪ್ಪ ಅವರ ಕೈಯಲ್ಲಿದೆ. ಅವರಿಂದ ಯಾವ ಕ್ಷಣದಲ್ಲಾದರೂ ಸರಕಾರಕ್ಕೆ ಗಂಡಾಂತರ ಬರಬಹುದು.
* ಸರಕಾರ ಉರುಳಿಸುವ ಕೆಲಸಕ್ಕೆ ನಾವು ಕೈಹಾಕುವುದಿಲ್ಲ. ಅದರ ಅಗತ್ಯ ನಮಗಿಲ್ಲ.
* ಕಾವೇರಿ ವಿಚಾರದಲ್ಲಿ ನಮಗೆ ರೈತರ ಹಿತ ಮುಖ್ಯ. ಇದರ ರಾಜಕೀಯ ಲಾಭ ಪಡೆದುಕೊಳ್ಳುವ ಕೆಟ್ಟ ಆಲೋಚನೆ ನಮಗಿಲ್ಲ.
* ಕಾರ್ಯಕ್ರಮಗಳ ಆಧಾರದ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ.
* ವಿಧವೆಯರಿಗೆ ಮಾಸಾಸನ, ವಿಕಲಚೇತನರಿಗೆ ಆರ್ಥಿಕ ಸೌಲಭ್ಯ ಸಿಗಬೇಕೆನ್ನುವುದು ನಮ್ಮ ಅಭಿಪ್ರಾಯ.
* ಮೌಲ್ಯವರ್ಧಿತ ತೆರಿಗೆಯನ್ನು ಶೇ.2.5 ಕಡಿಮೆ ಮಾಡುವ ಉದ್ದೇಶ ಹೊಂದಿದ್ದೇವೆ.












Click it and Unblock the Notifications